ಚನ್ನಮ್ಮನ ಕಿತ್ತೂರು, ಅಕ್ಟೋಬರ್ 28: ನಾಗರಿಕರಲ್ಲಿ ನಾಡ ಪ್ರೇಮ ಮತ್ತು ದೇಶಪ್ರೇಮ ಬಿತ್ತುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಪಾತ್ರ ಅನನ್ಯವಾದುದು. ದೇಶದ ಪರಂಪರೆ ಹಿಂದುಗಳ ಸಂರಕ್ಷಣೆ ಮತ್ತು ಸನಾತನ ಧರ್ಮದ ಸಂಸ್ಕೃತಿ ಉಳಿವಿಗಾಗಿ ಸದಾ ಜಾಗೃತಗೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈ ದೇಶದಲ್ಲಿ ಸಂಸ್ಥಾಪನೆಯಾಗಿ ನೂರು ವಸಂತಗಳನ್ನು ಪೂರೈಸಿದ ಪ್ರಯುಕ್ತ ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಸಾವಿರಾರು ಸ್ವಯಂ ಸೇವಕರ ತಂಡವು ಪಟ್ಟಣದಾದ್ಯಂತ ಪಥ ಸಂಚಲನ ಕೈಗೊಂಡು ಕಲ್ಮಠದ ಆವರಣದಲ್ಲಿ ಹಮ್ಮಿಕೊಂಡ ವಿಚಾರಗೋಷ್ಠಿಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ವಿಜಯದಶಮಿ ಹಾಗೂ ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ ಸಂದರ್ಭದಲ್ಲಿ ಈ ಶತಮಾನೋತ್ಸವ ಸಂಭ್ರಮದಲ್ಲಿ ಆರ್ ಎಸ್ ಎಸ್ ಸಂಸ್ಥೆ ಹುಟ್ಟಿದ ಬಗೆ ಈವರೆಗೆ ದೇಶದ ತುರ್ತು ಸಂದರ್ಭಗಳಲ್ಲಿ ಮಾಡಿದ ಜನೋಪಮೋಗಿ ಕಾರ್ಯಗಳ ಕುರಿತು ಅವರು ಮಾತನಾಡಿದರು.
ನೆರೆಹಾವಳಿ, ಭೂಕಂಪ, ಕೋವಿಡ್ ಮೊದಲಾದ ಸಂದರ್ಭಗಳಲ್ಲಿ ಸಂಘದ ಸೇವಕರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ನೊಂದವರ ಕಷ್ಟದಲ್ಲಿ ನೆರವಾಗಿದ್ದು ಸ್ಮರಣೀಯ ಎಂದರು. ಸಂಘದ ಆಶಯಗಳನ್ನು ಇಂದಿನ ಯುವ ಪೀಳಿಗೆಗೆ ತಲುಪಿಸಬೇಕಾದ ಅಗತ್ಯತೆ ಇದೆ ಎಂದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ಕೈಗೊಂಡ ಸ್ವಯಂ ಸೇವಕರು ರಾಷ್ಟ್ರಪ್ರೇಮದ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಸುರೇಶ ಮಾರಿಹಾಳ, ಲಕ್ಷ್ಮೀ ಇನಾಮದಾರ, ಬಸನಗೌಡ ಸಿದ್ರಾಮನಿ, ಸಂದೀಪ ಕುಲಕರ್ಣಿ ಸೇರಿದಂತೆ ಹಲವಾರು ಮುಖಂಡರು, ಹಾಲಿ ಮಾಜಿ ಜನಪ್ರತಿನಿಧಿಗಳು ಸಾವಿರಾರು ಸ್ವಯಂ ಸೇವಕರು ಭಾಗಿಯಾಗಿದ್ದರು.