ಮೈಸೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿರುವ ಲೋಕಾಯುಕ್ತ ಪೊಲೀಸರನ್ನು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಸೋಮವಾರ ಲೇವಡಿ ಮಾಡಿದ್ದಾರೆ.
ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಾಯುಕ್ತ ವರದಿಯನ್ನು ತಮಗಿಷ್ಟ ಬಂದ ರೀತಿ ಬರೆಸಿಕೊಂಡಿದ್ದಾರೆ. ಅವರನ್ನು ದೇವರೇ ಕಾಪಾಡಬೇಕು ಎಂದು ಟೀಕಿಸಿದರು.
ಈ ವಿಚಾರದಲ್ಲಿ ತಪ್ಪು ಮಾಡದ ಅಮಾಯಕರು ಬಲಿಯಾಗುತ್ತಾರೆ. ಲೂಟಿ ಹೊಡೆದವರು ತಪ್ಪಿಸಿಕೊಳ್ಳುತ್ತಾರೆ. ಮುಡಾ ಹಗರಣ ಕಣ್ಣಿಗೆ ಕಟ್ಟಿದಂತಿದೆ. ಸಾಕಷ್ಟು ಪ್ರಕರಣಗಳನ್ನು ತೆಗೆದರೆ ಮುಖ್ಯಮಂತ್ರಿಗಳ ಬಂಡವಾಳ ಗೊತ್ತಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ತಮ್ಮ ವಿರುದ್ಧ ಕೇಳಿ ಬಂದಿರುವ ಭೂಕಬಳಿಕೆ ಆರೋಪ ಕುರಿತು ಮಾತನಾಡಿದ ಅವರು, 40 ವರ್ಷದ ಹಿಂದೆ ಸ್ವಂತ ದುಡ್ಡಿನಲ್ಲಿ ಖರೀದಿಸಿದ ಬಿಡದಿಯ ನನ್ನ ಜಮೀನನ್ನು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ರಚಿಸಿದ ಎಸ್ಐಟಿಯಿಂದ ಅಳತೆ ಮಾಡಿಸುತ್ತಿದ್ದಾರೆ. ಆ ಜಮೀನಿನ ಮೂಲ ದಾಖಲೆಗಳೇ ಇಲ್ಲ ಎಂದವರು, ಈಗ ಅಳತೆ ಮಾಡಿಸುತ್ತಿದ್ದಾರೆ. ಇದರಿಂದ ನನ್ನನ್ನು ಹೆದರಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.