
ಬೆಳಗಾವಿ, ಫೆಬ್ರುವರಿ 25: ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಮಹಾದೇವಪ್ಪ ಮೇಲೆ ನೀಡಿದ್ದ ಪೋಕ್ಸೋ ಕೇಸ್ ಅನ್ನು ಸಂತ್ರಸ್ತ ಬಾಲಕಿಯ ತಾಯಿ ವಾಪಸ್ ಪಡೆದಿದ್ದಾರೆ.
ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಂತ್ರಸ್ತ ಬಾಲಕಿಯ ತಾಯಿ, ಯಾವುದೇ ಒತ್ತಡ ಇಲ್ಲದೆ ಕಂಡಕ್ಟರ್ ಮಹದೇವಪ್ಪ ವಿರುದ್ದ ನೀಡಿದ್ದ ಪೋಕ್ಸೋ ಕೇಸ್ ವಾಪಸ್ ಪಡೆದಿದ್ದೇವೆಂದು ಹೇಳಿದ್ದಾರೆ.ನಾವು ಕೂಡ ಕನ್ನಡಿಗರೇ. ಈ ವಿಚಾರದಲ್ಲಿ ಕನ್ನಡ-ಮರಾಠಿಗರ ನಡುವೆ ಜಗಳ ಆಗುತ್ತಿದೆ. ನಿರ್ವಾಹಕ ಮಹಾದೇವಪ್ಪ ಅವರ ಮೇಲೆ ನೀಡಿದ್ದ ದೂರನ್ನು ಹಿಂಪಡೆದಿದ್ದೇವೆ ಎಂದು ತಿಳಿಸಿದ್ದಾರೆ.
ಬೆಳಗಾವಿಯಿಂದ ಬಾಳೇಕುಂದ್ರಿಗೆ ಬರುತ್ತಿದ್ದೆವು. ಈ ವೇಳೆ ಟಿಕೆಟ್ ಸಂಬಂಧ ಆಗಿರುವ ಜಗಳ ಇದು. ಇದನ್ನು ಕನ್ನಡ, ಮರಾಠಿ ಎಂದು ಪ್ರಚಾರ ಮಾಡುತ್ತಿದ್ದಾರೆ.
ನಾವು ಕನ್ನಡದ ಅಭಿಮಾನಿಗಳು, ನಮ್ಮಲ್ಲಿ ಜಾತಿ ಭೇದಬಾವ ಇಲ್ಲ. ವಿನಾಕಾರಣ ಕನ್ನಡ, ಮರಾಠಿ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಇದನ್ನು ಮುಂದಿಟ್ಟುಕೊಂಡು ಕರ್ನಾಟಕ, ಮಹಾರಾಷ್ಟ್ರ ನಡುವೆ ಜಗಳ ಆರಂಭವಾಗಿದೆ. ನಮ್ಮ ಮಗಳಿಗೆ ಅನ್ಯಾಯವಾಗಿದೆ. ನಾವು ಪ್ರಕರಣ ವಾಪಸ್ ಪಡೆಯುತ್ತೇವೆ, ಇದನ್ನು ಇಲ್ಲಿಗೆ ನಿಲ್ಲಿಸಿ. ಕೇಸ್ ಸ್ವ-ಇಚ್ಛೆಯಿಂದ ವಾಪಸ್ ಪಡೆಯುತ್ತಿದ್ದೇವೆ. ನಮ್ಮ ಮೇಲೆ ಯಾವುದೇ ಒತ್ತಡ ಇಲ್ಲ ಎಂದು ಹೇಳಿದ್ದಾರೆ.
ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಪ್ರತಿಕ್ರಿಯಿಸಿ, ವಿಡಿಯೋ ಮೂಲಕ ಪೋಕ್ಸೋ ಕೇಸ್ ವಾಪಸ್ ಪಡೆಯುವುದಾಗಿ ದೂರುದಾರರು ತಿಳಿಸಿದ್ದಾರೆ. ಅದರಲ್ಲಿ ನಾವೂ ಕನ್ನಡಿಗರು ಎಂದು ಅವರು ಹೇಳಿದ್ದಾರೆ.
ಆ ವಿಡಿಯೋ ಪರಿಶೀಲಿಸಿ, ತನಿಖೆಯಲ್ಲಿ ಸಾಕ್ಷಿಯಾಗಿ ಪರಿಗಣಿಸುತ್ತೇವೆ. ತಕ್ಷಣ ತನಿಖಾಧಿಕಾರಿಯನ್ನು ಬದಲಿಸಿ, ಪ್ರಕರಣವನ್ನು ಎಸಿಪಿಗೆ ವಹಿಸಿದ್ದೇವೆ. ಅದೇ ರೀತಿ ಈ ವಿಡಿಯೋ ಸಂಗ್ರಹಿಸಿ, ಮತ್ತೊಂದು ಹೇಳಿಕೆ ದಾಖಲಿಸುವಂತೆ ತನಿಖಾಧಿಕಾರಿಗೆ ಸೂಚಿಸಿದ್ದೇನೆ. ಹಾಗೆಯೇ ಮಾರಿಹಾಳ ಪೊಲೀಸ್ ಠಾಣೆ ಸಿಪಿಐ ಅವರನ್ನು ಬೇರೆಡೆ ವರ್ಗಾವಣೆ ಮಾಡಲಾಗಿದೆ. ಅವರ ವಿರುದ್ಧ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.