ನವದೆಹಲಿ, ಫೆ18: ಜ್ಞಾನೇಶ್ ಕುಮಾರ್ ಅವರನ್ನು ಹೊಸ ಮುಖ್ಯ ಚುನಾವಣಾ ಆಯುಕ್ತರನ್ನಾಗಿ (Chief Election Commissioner) ನೇಮಿಸಲಾಗಿದೆ ಎಂದು ಕೇಂದ್ರ ಕಾನೂನು ಸಚಿವಾಲಯ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನೊಳಗೊಂಡ ಚುನಾವಣಾ ಸಮಿತಿಯ ಸಭೆಯ ನಂತರ ಸರ್ಕಾರ ನೂತನ ಮುಖ್ಯ ಚುನಾವಣಾ ಆಯುಕ್ತರ ಹೆಸರನ್ನು ಘೋಷಣೆ ಮಾಡಿದೆ.
ಆಯ್ಕೆ ಸಮಿತಿಯು ಸೋಮವಾರ ಸಂಜೆ ದೆಹಲಿಯ ಸೌತ್ ಬ್ಲಾಕ್ನಲ್ಲಿರುವ ಪ್ರಧಾನಿ ಕಚೇರಿಯಲ್ಲಿ ಸಭೆ ಸೇರಿತು. ಶೋಧನಾ ಸಮಿತಿಯಿಂದ ಆಯ್ಕೆ ಮಾಡಲಾದ ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಿತು.
ಮುಖ್ಯ ಚುನಾವಣಾ ಆಯುಕ್ತರು ಆರು ವರ್ಷಗಳ ಕಾಲ ಅಥವಾ 65 ವರ್ಷ ತುಂಬುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೂ ಅಧಿಕಾರದಲ್ಲಿರುತ್ತಾರೆ. ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಪಟ್ಟಂತೆ ಜಾರಿಯಾಗಿರುವ ಹೊಸ ಕಾನೂನಿನ ಪ್ರಕಾರ ನೇಮಕವಾದ ಮೊದಲ ಮುಖ್ಯ ಚುನಾವಣಾ ಆಯುಕ್ತರು ಎನ್ನುವ ಹೆಗ್ಗಳಿಕೆಗೆ ಜ್ಞಾನೇಶ್ ಕುಮಾರ್ ಪಾತ್ರರಾಗಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಅವಧಿ ಮುಕ್ತಾಯವಾದ ಬಳಿಕ ಹಿರಿಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅಧಿಕಾರ ಸ್ವೀಕರಿಸಲಿದ್ದಾರೆ. ರಾಜೀವ್ ಕುಮಾರ್ 65 ವರ್ಷ ತುಂಬಿದ ಬಳಿಕ ಅಂದರೆ ಮಂಗಳವಾರ ಅಧಿಕಾರದಿಂದ ನಿವೃತ್ತರಾಗಲಿದ್ದಾರೆ.