ಬೈಲಹೊಂಗಲ, : ಎಡಿಎಂ ಅಗ್ರೋ ಇಂಡಸ್ಟ್ರೀಸ್ ಕೋಟಾ ಅಂಡ್ ಅಕೋಲಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿ.ಎಸ್.ಆರ್. ಅನುದಾನದಡಿ ಬೈಲಹೊಂಗಲ ತಾಲೂಕಿನ ಸರ್ಕಾರಿ ಶಾಲೆಗಳಿಗೆ ಶೈಕ್ಷಣಿಕ ತಂತ್ರಜ್ಞಾನ ಪರಿಕರಗಳ ವಿತರಣೆ ಮಾಡಲಾಯಿತು. ಒಟ್ಟು ಹತ್ತು ಶಾಲೆಗಳಿಗೆ ಪ್ರೊಜೆಕ್ಟರ್, ಲ್ಯಾಪ್ಟಾಪ್, ಪ್ರಿಂಟರ್, ಟೇಬಲ್, ಕುರ್ಚಿ, ಪ್ರೊಜೆಕ್ಟರ್ ಸ್ಕ್ರೀನ್, ಹಾಗೂ ಡೆಸ್ಕ್ ಸೇರಿ ಹಲವು ಉಪಯುಕ್ತ ಸಲಕರಣೆಗಳನ್ನು ನೀಡಲಾಯಿತು.
ಈ ವಿತರಣಾ ಕಾರ್ಯಕ್ರಮದಲ್ಲಿ ಎಡಿಎಂ ಅಗ್ರೋ ಇಂಡಸ್ಟ್ರೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪ್ಲಾಂಟ್ ಹೆಡ್ ಶ್ರೀ ಕರಿಯಪ್ಪ ವಾಲಿಕಾರ್, ಹೆಚ್.ಆರ್. ಮ್ಯಾನೇಜರ್ ಶ್ರೀ ಅನಿಲ್ ಕುಮಾರ ತೆರದಾಳ, ಆಪೀಸರ ಅಗ್ರೋನಾಮಿ ಶ್ರೀ ಗುರುನಾಥ ಶಿಶುವಿನಹಾಳ, ಹಾಗೂ ಸೀನಿಯರ್ ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಶ್ರೀ ಲೋಕೇಶ್ ಸರಾಪ್ ಅವರು ಭಾಗವಹಿಸಿ, ಪರಿಕರಗಳನ್ನು ಶಾಲೆಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕರಿಯಪ್ಪ ವಾಲಿಕಾರ್, “ನಮ್ಮ ಕಂಪನಿಯ ಲಾಭಾಂಶದಲ್ಲಿ ಒಂದು ಭಾಗವನ್ನು ಶಿಕ್ಷಣದ ಮೇಲೂ ಮೀಸಲಿಟ್ಟಿದ್ದೇವೆ. ವಿಶೇಷವಾಗಿ, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಈ ಭಾಗದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಹಾಯವಾಗುವಂತೆ ನಾವು ಈ ಸಲಕರಣೆಗಳನ್ನು ಒದಗಿಸಿದ್ದೇವೆ” ಎಂದು ಹೇಳಿದರು.
ಶ್ರೀ ಅನಿಲ್ ಕುಮಾರ ತೆರದಾಳ ಮಾತನಾಡಿ, “ನಮ್ಮ ಕಂಪನಿಯಿಂದ ನೀಡಲಾದ ಈ ವಸ್ತುಗಳನ್ನು ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು.quality ಶಿಕ್ಷಣ ಪಡೆದು, ಸಮಾಜಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸುವ ಪ್ರಜೆಗಳಾಗಿ ಬೆಳೆಯಬೇಕು” ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್. ಪ್ಯಾಟಿ ಮಾತನಾಡಿ, “ಎಡಿಎಂ ಕಂಪನಿಯು ನಮ್ಮ ಬೈಲಹೊಂಗಲ ತಾಲೂಕಿನ ಶಾಲೆಗಳಿಗೆ ನೀಡುತ್ತಿರುವ ಈ ದೇಣಿಗೆ ಶ್ಲಾಘನೀಯ. ಇದರಿಂದ ವಿದ್ಯಾರ್ಥಿಗಳು ತಂತ್ರಜ್ಞಾನ ಆಧಾರಿತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ” ಎಂದರು.
ಈ ಸಂದರ್ಭದಲ್ಲಿ ಶ್ರೀ ಗುರುನಾಥ ಶಿಶುವಿನಹಾಳ ಅವರು ಎಡಿಎಂ ಕಂಪನಿಯ ಕೃಷಿ ಹಾಗೂ ಶಿಕ್ಷಣ ಸೇವೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಎನ್.ಜಿ. ಮಲ್ಲಾ ಕಾರ್ಯಕ್ರಮವನ್ನು ನಿರೂಪಿಸಿದರು. ಮುಖ್ಯ ಉಪಾಧ್ಯಾಯರಾದ ಶ್ರೀಮತಿ ಎಸ್.ಎಮ್. ಕಿಲ್ಲೆದಾರ ಅವರು ಎಲ್ಲರನ್ನು ಸ್ವಾಗತಿಸಿದರು. ಅಜ್ಜಪ್ಪ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೈಲಹೊಂಗಲ ತಾಲೂಕಿನ ರೈತರು, ಎಸ್.ಡಿ.ಎಂ.ಸಿ. ಸದಸ್ಯರು, ಶಾಲಾ ಅಧ್ಯಕ್ಷರು, ಉಪಾಧ್ಯಕ್ಷರು, ಪಾಲಕರು, ಶಿಕ್ಷಕರು, ಸಿ.ಆರ್.ಪಿ. ಮತ್ತು ಬಿ.ಆರ್.ಪಿ.ಗಳು ಉಪಸ್ಥಿತರಿದ್ದರು.
ಕೊನೆಯಲ್ಲಿ, ಕಂಪನಿಯ ಅಧಿಕಾರಿಗಳನ್ನು ಸನ್ಮಾನಿಸಿ, ಶಿಕ್ಷಕಿ ಶ್ರೀಮತಿ ಆರ್.ಎಸ್. ಉಳ್ಳೆಗಡ್ಡಿ ವಂದನಾರ್ಪಣೆ ಮಾಡಿದರು.