ಬೆಳಗಾವಿ: ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್ ಬೆಂಗಳೂರು, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬೆಂಗಳೂರು ದಕ್ಷಿಣದ ಆಶ್ರಯದಲ್ಲಿ ಬೆಂಗಳೂರು ನಗರದಲ್ಲಿ ನಡೆದ ರಾಜ್ಯಮಟ್ಟದ ರೋಪ್ ಸ್ಕಿಪ್ಪಿಂಗ್ ಪಂದ್ಯಾವಳಿಯಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕೆ.ಆರ್.ಸಿ.ಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಸ್ಪರ್ಧೆಯಲ್ಲಿ ಶಾಲೆಯ ಆರು ವಿದ್ಯಾರ್ಥಿಗಳು ಅಂಡರ್-14 ವಯಸ್ಸಿನ ವಿಭಾಗದಲ್ಲಿ ಸ್ಪರ್ಧಿಸಿ, ಅದರಲ್ಲಿ ಕುಮಾರಿ ವರ್ಷಿಣಿ ಅಜ್ಜಪ್ಪ ಅಂಗಡಿ ಫ್ರೀ ಸ್ಟೈಲ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ಸಾಧನೆಯೊಂದಿಗೆ ಅವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ, ಬೆಳಗಾವಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.ವರ್ಷಿಣಿಯ ಸಾಧನೆಗೆ ಹಲವು ಗಣ್ಯರು ಶುಭಾಶಯ ತಿಳಿಸಿದ್ದಾರೆ. ಬೆಳಗಾವಿ ಉಪನಿರ್ದೇಶಕರಾದ ಶ್ರೀಮತಿ ಲೀಲಾವತಿ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎ.ಎನ್. ಪ್ಯಾಟಿ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ಕಸಾಳೆ.ಬಿ.ಎನ್., ಹಾಗೂ ಶಾಲಾ ಮುಖ್ಯೋಪಾಧ್ಯಾಯ ಶ್ರೀ ಎಂ.ಸಿ. ಬಿರಾದಾರ ಅವರು ಅವಳ ಗೆಲುವಿಗೆ ಸಂತಸ ವ್ಯಕ್ತಪಡಿಸಿದರು.
ವರ್ಷಿಣಿಯ ತರಬೇತಿಗೆ ಮಾರ್ಗದರ್ಶನ ನೀಡಿದ ಶಿಕ್ಷಕರಾದ ಶ್ರೀ ಗೆಜಪತಿ ಹಾಗೂ ಶ್ರೀಮತಿ ಶ್ರೀದೇವಿ ಮಲ್ಲೂರ ಅವರ ಶ್ರಮವೂ ಈ ಯಶಸ್ಸಿಗೆ ಕಾರಣವಾಗಿದೆ. ಬೈಲಹೊಂಗಲ ಕ್ಷೇತ್ರದ ಶಾಸಕರಾದ ಶ್ರೀ ಮಾಹಂತೇಶ ಕೌಜಲಗಿ ಸಹ ಶುಭಾಶಯಗಳನ್ನು ತಿಳಿಸಿದ್ದಾರೆ.
ವರ್ಷಿಣಿಯ ತಂದೆ-ತಾಯಿ ಇಬ್ಬರೂ ಶಿಕ್ಷಕರಾಗಿದ್ದು, ಶ್ರೀ ಅಜ್ಜಪ್ಪ ಅಂಗಡಿ ಅವರು ಈ ಹಿಂದೆ ಬೈಲಹೊಂಗಲ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದರು. ತಮ್ಮ ಪುತ್ರಿಯ ಈ ಸಾಧನೆಗೆ ಅವರು ಸಂತಸ ವ್ಯಕ್ತಪಡಿಸಿದ್ದು, “ವರ್ಷಿಣಿ ರಾಷ್ಟ್ರಮಟ್ಟದಲ್ಲಿ ಮಿಂಚಲಿ” ಎಂಬ ಹಾರೈಕೆ ವ್ಯಕ್ತಪಡಿಸಿದ್ದಾರೆ.