ಬೆಂಗಳೂರು: ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಶಿಬಿರ 2025ರಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (NCC) ಕರ್ನಾಟಕ-ಗೋವಾ ನಿರ್ದೇಶನಾಲಯಕ್ಕೆ ಪ್ರತಿಷ್ಠಿತ ಪ್ರಧಾನ ಮಂತ್ರಿ ಬ್ಯಾನರ್ 2025ರ ಪ್ರಶಸ್ತಿ ಲಭಿಸಿದೆ.
ಪ್ರಧಾನಿ ಮೋದಿಯವರಿಂದ ಎನ್ಸಿಸಿ ನಿರ್ದೇಶನಾಲಯ ಕರ್ನಾಟಕ ಮತ್ತು ಗೋವಾದ ಉಪ ಮಹಾನಿರ್ದೇಶಕ ಏರ್ ಕಮೋಡೋರ್ ಎಸ್ಬಿ ಅರುಣ್ಕುಮಾರ್ ವಿಎಸ್ಎಂ ಅವರು ಪ್ರಧಾನ ಮಂತ್ರಿಗಳ ಬ್ಯಾನರ್ ಅನ್ನು ಸ್ವೀಕರಿಸಿದರು.
ಕರ್ನಾಟಕ ಮತ್ತು ಗೋವಾ ಎನ್ಸಿಸಿ ನಿರ್ದೇಶನಾಲಯವು ಶೂಟಿಂಗ್ ಚಾಂಪಿಯನ್ಶಿಪ್, ಅಖಿಲ ಭಾರತ ವಾಯು ಸೈನಿಕ್ ಕ್ಯಾಂಪ್, ಅಖಿಲ ಭಾರತ ಥಾಲ್ ಸೈನಿಕ್ ಕ್ಯಾಂಪ್ (ಬಾಲಕರು ಮತ್ತು ಹುಡುಗಿಯರು ಸೇರಿ), ಮತ್ತು ಯಾಚಿಂಗ್ ರೆಗಟ್ಟಾ ಮತ್ತು ಆರ್ಡಿಸಿ 2025 ರಲ್ಲಿ ಪ್ರಥಮ ಸ್ಥಾನ ಪಡೆದಿದೆ. ತರಬೇತಿ, ವೃತ್ತಿಪರತೆ ಮತ್ತು ಸ್ಥಿರತೆಯ ಉನ್ನತ ಗುಣಮಟ್ಟವನ್ನು ಪ್ರದರ್ಶಿಸಿದೆ ಎಂದು ರಕ್ಷಣಾ ಸಾರ್ವಜನಿಕ ಸಂಪರ್ಕ ಅಧಿಕಾರಿಯೊಬ್ಬರು ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ವರ್ಷ ಚಾಂಪಿಯನ್ ಡೈರೆಕ್ಟರೇಟ್ ಕಿರೀಟವನ್ನು ಪಡೆದಿರುವುದು ಕೆಡೆಟ್ಗಳು ಮತ್ತು ಎಲ್ಲಾ ಸಿಬ್ಬಂದಿ ಸೇರಿದಂತೆ ಇಡೀ ತಂಡದ ವೃತ್ತಿಪರತೆ, ಮನೋಭಾವ ಮತ್ತು ಕಠಿಣ ಪರಿಶ್ರಮದ ಪ್ರತಿಬಿಂಬವಾಗಿದೆ ಎಂದು ಏರ್ ಕಮೋಡೋರ್ ಅರುಣ್ಕುಮಾರ್ ಹೇಳಿದ್ದಾರೆ.