
ಬೆಳಗಾವಿ, ಡಿಸೆಂಬರ್ 07: ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ ಅವರ ವಿಶೇಷ ಕಾಳಜಿಯ ಪ್ರತಿಫಲವಾಗಿ ಸುವರ್ಣ ವಿಧಾನಸೌಧ ಪಶ್ಚಿಮ ಭಾಗದಲ್ಲಿನ ಸುಮಾರು 1 ಎಕರೆ ಪ್ರದೇಶದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಬಯಲು ವಿಜ್ಞಾನ ಉದ್ಯಾನದ ಸಿದ್ದತೆ ನಡೆಯುತ್ತಿದೆ.
ಸುವರ್ಣಸೌಧಕ್ಕೆ ಜಾಗ ಕೊಟ್ಟ ಹಲಗಾ, ಬಸ್ತವಾಡ ಗ್ರಾಮದ ನರೇಗಾ ಕೂಲಿ ಕಾರ್ಮಿಕರ ನೆರವಿನೊಂದಿಗೆ ಮಕ್ಕಳಿಗಾಗಿ ಸೈನ್ಸ್ ಪಾರ್ಕ್ ನಿರ್ಮಾಣ ಕಾರ್ಯ ಜರುಗುತ್ತಿದ್ದು, ಬೆಂಗಳೂರಿನ ಗ್ಯಾಂತ್ರೋ ಕಂಪನಿಯು,. ಗಣಿತ, ಭೌತಶಾಸ್ತ್ರ, ಜೀವಶಾಸ್ತ್ರ, ಭೂಗೋಳ ವಿಷಯಗಳನ್ನೊಳಗೊಂಡ ಸುಮಾರು 22 ಪ್ರಾಯೋಗಿಕ ಮಾದರಿಗಳನ್ನು ಆಕರ್ಷಣೀಯವಾಗಿ ಅನುಷ್ಠಾನಗೊಳಿಸಲಾಗುತ್ತಿದೆ, ಮಕ್ಕಳಲ್ಲಿ ತೀವ್ರ ಕುತೂಹಲ ಮೂಡಿಸಿ ಹಲವು ನಿಗೂಢತೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚಟುವಟಿಕೆ ಕೈಗೊಳ್ಳಲು ನೆರವಾಘುವಂತೆ ಈ ವಿಜ್ಞಾನ ಪಾರ್ಕ್ ವಿನ್ಯಾಸಗೊಳಿಸಲಾಗುತ್ತಿದೆ.
ಏನೆಲ್ಲ ಇರಲಿದೆ ಪಾರ್ಕ್ನಲ್ಲಿ?
ಪ್ರಸಿದ್ದ ವಿಜ್ಞಾನಿ ನ್ಯೂಟನ್ ಹಾಗೂ ಆರ್ಕಿಮಿಡಿಸ್ ತತ್ವಗಳ ಪ್ರಾಯೋಗಿಕ ನಿರೂಪಣೆ ಮಾದರಿ, ನೆರಳಿನಿಂದ ಸಮಯ ಗುರುತಿಸುವಿಕೆ, ಮಳೆ ಹಾಗೂ ತೇವಾಂಶದ ಮಾಪನ, ವಿವಿಧ ವಾಹನಗಳು ಹೇಗೆ ಚಲಿಸುತ್ತವೆ ಎಂಬ ಸಂಪೂರ್ಣ ವಿವರಣೆ, ಬೆಳಕಿನ ನಾನಾ ಪ್ರಯೋಗಗಳು, ಪೆರಿಸ್ಕೋಪ್, ಮಸೂರಗಳ ಮಾದರಿಗಳು, ಕನ್ನಡಿಯೊಳಗಿನ ಆಟ, ಪ್ರಚ್ಛನ್ನ ಶಕ್ತಿಯಿಂದ ಚಲನಶಕ್ತಿ ಪ್ರಯೋಗ, ಸಿಂಪಥೆಟಿಕ್ ಸ್ವಿಂಗ್, ಪೈಥಾಗೋರಸ್ ಪ್ರಮೇಯ, ಸರಳ ಕ್ಯಾಮರಾ, ಗುರುತ್ವಾಕರ್ಷಣೆಯ ಚೆಂಡು, ಪ್ರತಿಧ್ವನಿ, ಕೇಂದ್ರ ತ್ಯಾಗಿ ಶಕ್ತಿ, ಜಲ ವಿದ್ಯುತ್ ಉತ್ಪಾದನೆ, ಸೋಲಾರ್ ವಾಟರ್ ಹೀಟರ್ ನ ಸ್ಕ್ವೇರ್ ವ್ಹೀಲ್ ಸೈಕಲ್, ಗೇರ್‌ಗಳ ವಿವಿಧ ಮಾದರಿಗಳು, 3ಡಿ ಮಾದರಿಯ ಪೆಂಡುಲಮ್, ಜಿನಿಟಿಕ್ ಮಾದರಿಯ ಪ್ರಯೋಗಗಳನ್ನು ಅಳವಡಿಸಲಾಗುತ್ತಿದೆ.
“ಸುವರ್ಣ ವಿಧಾನಸೌಧಕ್ಕೆ ಆಗಮಿಸುವ ಮಕ್ಕಳಿಗೆ ವಿಜ್ಞಾನದ ವಾತಾವರಣ ನಿರ್ಮಿಸಬೇಕು ಎಂಬ ಉದ್ದೇಶದಿಂದ ಈ ಪಾರ್ಕ್ ನಿರ್ಮಿಸುತ್ತಿದ್ದೇವೆ. ಇಲ್ಲಿ ಅಳವಡಿಸುವ ವಿಜ್ಞಾನ ಮಾದರಿಗಳಿಂದ ಮಕ್ಕಳಿಗೆ ಸಾಕಷ್ಟು ಮಾಹಿತಿ ತಿಳಿಯಲಿದೆ. 200ಕ್ಕೂ ಅಧಿಕ ನರೇಗಾ ಕೂಲಿ ಕಾರ್ಮಿಕ ಮಹಿಳೆಯರು, ಗ್ಯಾಂತ್ರೋ ಕಂಪನಿ ತಂತ್ರಜ್ಞ ವರ್ಗ ಕಳೆದ ಒಂದು ವಾರದಿಂದ ಉದ್ಯಾನ ನಿರ್ಮಾಣಕ್ಕೆ ಶ್ರಮಿಸುತ್ತಿದ್ದು, ಮುಖ್ಯಮಂತ್ರಿಗಳು, ಸಭಾಧ್ಯಕ್ಷರು, ಸಭಾಪತಿಗಳ ಸಮಯ ನೋಡಿಕೊಂಡು ಅಧಿವೇಶನದ ಮೊದಲ ವಾರದಲ್ಲಿ ಪಾರ್ಕ್ ಉದ್ಘಾಟಿಸಲಾಗುತ್ತದೆ” ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ತಿಳಿಸಿದ್ದಾರೆ.
“ನಲಿ-ಕಲಿ ಮಾದರಿಯಲ್ಲಿ ಆಟ ಆಡುತ್ತಲೇ ಮಕ್ಕಳು ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಅರಿತುಕೊಳ್ಳಬಹುದಾಗಿದೆ. ಪ್ರತಿ ವಿಜ್ಞಾನ ಚಾಲನಾ ಮಾದರಿಗಳ ಮುಂದೆ ಪ್ರಯೋಗದ ಉದ್ದೇಶ, ತತ್ವ, ಉಪಯೋಗ ಸೇರಿ ನಾನಾ ಮಾಹಿತಿಯನ್ನು ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ನಮೂದಿಸಲಾಗುತ್ತದೆ. ಇದೊಂದು ಬಯಲು ಉದ್ಯಾನ ಆಗಿರಲಿದ್ದು, ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇದು ಉಪಯುಕ್ತವಾಗಲಿದೆ.
ಅಲ್ಲದೇ ಇಲ್ಲಿನ ಉಪಕರಣಗಳು ಮಳೆ, ಚಳಿ, ಬಿಸಿಲಿಗೆ ಹಾನಿಯಾಗಲ್ಲ. ಇನ್ನು, ಪ್ರತಿ ಮಾದರಿ ಮುಂಭಾಗದ ಮಾಹಿತಿ ಫಲಕದಲ್ಲಿ ಕ್ಯೂ ಆರ್ ಕೋಡ್ ಅಳವಡಿಸಲಾಗಿದ್ದು, ಅದನ್ನು ಸ್ಕ್ಯಾನ್ ಮಾಡಿದರೆ ಆ ಪ್ರಯೋಗದ ಸಂಪೂರ್ಣ ವಿವರವೂ ದೊರೆಯಲಿದೆ” ಎನ್ನುತ್ತಾರೆ ಗ್ಯಾಂತ್ರೋ ಕಂಪನಿಯ ಭೀಮರಾವ್ ಕುಲಕರ್ಣಿ.