
ಚನ್ನಮ್ಮನ ಕಿತ್ತೂರು, ನವೆಂಬರ್ 03: ಪ್ರಸಕ್ತ ವರ್ಷ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 4ಲಕ್ಷ ಟನ್ ಕಬ್ಬು ನುರಿಸಿ, ಶೇ.12ರಷ್ಟು ಇಳುವರಿ ಪಡೆದುಕೊಳ್ಳುವ ಗುರಿ ಹೊಂದಿದ್ದೇವೆ ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಮೋಹನ ಎಮ್ ಹಿರೇಮಠ ಅವರು ತಿಳಿಸಿದರು.
ಎಮ್.ಕೆ.ಹುಬ್ಬಳ್ಳಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಈ ವರ್ಷದ ಕಬ್ಬು ನುರಿಸುವ ಕಾರ್ಯಕ್ಕೆ ಮೊದಲ ಹಂತವಾಗಿ ಬಾಯ್ಲರ್ ಪ್ರದೀಪನ ಮತ್ತು ಕೇನ್ ಕ್ಯಾರಿಯರ್ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಗತ್ಯ ಆರ್ಥಿಕ ಸಹಾಯದೊಂದಿಗೆ ಕಾರ್ಖಾನೆಯ ಎಲ್ಲ ಯಂತ್ರೋಪಕರಣಗಳನ್ನು ತಜ್ಞರ ನೇತೃತ್ವದಲ್ಲಿ ದುರಸ್ತಿಗೊಳಿಸಿ ಇದೇ ನವೆಂಬರ್ 15ರಂದು ಕಬ್ಬು ನುರಿಸುವ ಕಾರ್ಯವನ್ನು ಆರಂಭಸುತ್ತೇವೆ. ಇದರ ಜೊತೆಗೆ ಅಧಿಕ ಪ್ರಮಾಣದಲ್ಲಿ ಕಬ್ಬು ನುರಿಸಲು 5000 ಟಿಸಿಡಿ ಸಾಮರ್ಥ್ಯದ ಘಟಕವನ್ನು ಪ್ರತಿಷ್ಠಾಪಿಸಲು ತಯಾರಿಯಲ್ಲಿದ್ದೇವೆ. ಈ ವರ್ಷ ಪ್ರತಿ 15ದಿನಗಳಿಗೊಮ್ಮೆ ರೈತರ ಬಿಲ್ ಅವರ ಖಾತೆಗೆ ಜಮೆಮಾಡುತ್ತೇವೆ ಎಂದು ಎಮ್ ಡಿ ಹಿರೇಮಠ ರೈತರಿಗೆ ಭರವಸೆ ನೀಡಿದರು.

ಕಿತ್ತೂರು ಕಲ್ಮಠದ ರಾಜಗುರು ಮಡಿವಾಳ ಶ್ರೀಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಕಿತ್ತೂರು ನೆಲದ ರೈತರ ಅಭಿಮಾನ, ಸ್ವಾಭಿಮಾನದ ಪ್ರತೀಕ ಮಲಪ್ರಭಾ ಸಕ್ಕರೆ ಕಾರ್ಖಾನೆ ಎಂದು ರೈತರನ್ನು ಶ್ಲಾಘಸಿದರು.
ಕಳೆದ ದಶಕಗಳಲ್ಲಿ ಉದ್ಯಮ ಕ್ಷೇತ್ರದಲ್ಲಿ ಈ ಕಾರ್ಖಾನೆ ರಾಜ್ಯದ ಗಮನ ಸೆಳೆದಂತೆ ಮುಂದಿನ ದಿನಗಳಲ್ಲಿಯೂ ರೈತರ ಸಹಕಾರದೊಂದಿಗೆ ಮತ್ತೆ ತಲೆ ಎತ್ತಿ ಮೆರೆಯಲಿ ಎಂದು ಆಶೀರ್ವಚನ ನೀಡಿದರು.
ಕಾದರವಳ್ಳಿ ಸೀಮಿಮಠದ ಡಾ.ಪಾಲಾಕ್ಷ ಶಿವಯೋಗಿಗಳು ದಿವ್ಯ ಸಾನಿಧ್ಯವಹಿಸಿ ಕಾರ್ಖಾನೆಗೆ ಈ ನಾಡಿನ ರೈತರೇ ಬೆನ್ನುಲುಬು. ಆ ಬೆನ್ನುಲುಬು ಯಾವಾಗಲೂ ಗಟ್ಟಿಯಾಗಿ ಇರಬೇಕಾಗಿದೆ. ರೈತರು ಮತ್ತೊಬ್ಬರ ಕೆಳಗೆ ದುಡಿಯುವದಕ್ಕಿಂತ ಅವರೇ ಮಾಲೀಕರಾಗಿರುವ ಈ ಮಲಪ್ರಭಾ ಶುಗರ್ ಕಾರ್ಖಾನೆಯನ್ನು ಮುಚ್ಚದಂತೆ ಕಾಪಾಡಿಕೊಂಡು ಹೋಗಬೇಕಾಗಿದೆ ಎಂದು ಎಂದು ಆಶೀರ್ವಾಚನ ನೀಡಿದರು.
ಕಾಂಗ್ರೆಸ್ ಮುಖಂಡ ನಾನಾಸಾಹೇಬ್ ಪಾಟೀಲ್ ಮಾತನಾಡಿ ರೈತರ ಸಂಸ್ಥೆಯನ್ನು ಉಳಿಕೊಂಡು ಬೆಳೆಸಿಕೊಂಡು ಹೋಗಲು ಪೂರ್ಣ ಸಹಕಾರಕ್ಕೆ ಬದ್ಧವಾಗಿದ್ದೇನೆ ಎಂದು ತಿಳಿಸಿದರು.
ರೈತ ಮುಖಂಡ ಬಸನಗೌಡ ಪಾಟೀಲ್ ಮಾತನಾಡಿ ಸೂಕ್ತ ಸಮಯದಲ್ಲಿ ರೈತರಿಗೆ, ಸಿಬ್ಬಂದಿಗಳಿಗೆ ವೇತನ ನೀಡಬೇಕು. ಅಧಿಕ ಸಾಮರ್ಥ್ಯದ ಕಬ್ಬು ನುರಿಸುವ ಘಟಕವನ್ನು ಸ್ಥಾಪಿಸಬೇಕು ಎಂದು ಆಡಳಿತ ಮಂಡಳಿಗೆ ಮನವಿ ಮಾಡಿದರು.
ಕಾರ್ಮಿಕ ಹಿತರಕ್ಷಣಾ ಸಂಘಟನೆ ಅಧ್ಯಕ್ಷ ರಾಜೇಂದ್ರ ಶಿರಮೋಜಿ ಮಾತನಾಡಿ, ಕಬ್ಬು ನುರಿಸಲು ಅಗತ್ಯ ಯಂತ್ರೋಪಕರಣಗಳನ್ನು ದುರಸ್ತಿಗೊಳಿಸಿ, ಪೂರ್ಣ ಸಿದ್ಧತೆಯಲ್ಲಿದ್ದೇವೆ ಎಂದರು.

ಕಚೇರಿ ಅಧೀಕ್ಷಕ ಡಾ. ಎಸ್.ಜಿ.ಹೆಗಡೆ ಸ್ವಾಗತ ಮಾಡಿದರು, ಸುರೇಶ ಗಣಾಚಾರಿ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಬೈಲೂರು ನಿಷ್ಕಲ ಮಂಟಪದ ನಿಜಗುಣಣಾನಂದ ಶ್ರೀ, ಕಾದರವಳ್ಳಿ ಶ್ರೀರಾಮ ಮಂದಿರದ ಗುರುಪುತ್ರ ಮಹಾರಾಜರು, ಕಾರ್ಖಾನೆಯ ಉಪಾಧ್ಯಕ್ಷೆ ಲಕ್ಷ್ಮೀ ಅರಳಿಕಟ್ಟಿ, ಕಾರ್ಖಾನೆಯ ಆಡಳಿತ ಮಂಡಳಿ ನಿರ್ದೇಶಕರು, ಸಿಬ್ಬಂದಿಗಳು, ಕಾರ್ಮಿಕರು, ರೈತರು ಉಪಸ್ಥಿತರಿದ್ದರು.