
ಚನ್ನಮ್ಮನ ಕಿತ್ತೂರು, ಅಕ್ಟೋಬರ್ 19: ಕಿತ್ತೂರು ವಿಜಯೋತ್ಸವಕ್ಕೆ ಕಾರಣಿಕರ್ತ ಗುರಿಕಾರ(ಶಾರ್ಪ್ ಶೂಟರ್) ಅಮಟೂರ ಬಾಳಪ್ಪ. ಬ್ರಿಟಿಷ್ ಕಲೆಕ್ಟರ್ ಥ್ಯಾಕರೆ ಎದೆಗೆ ಗುಂಡಿಟ್ಟು ಹೊಡೆದುರುಳಿಸಿ, ಇತ್ತ ರಾಣಿ ಚನ್ನಮ್ಮನನ್ನು ರಕ್ಷಿಸಿ ಗೆಲುವು ತಂದು ಕೊಡುತ್ತಿದ್ದಂತೆ ಕಿತ್ತೂರಿನಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು.ವೀರಕೇಸರಿ ಬಾಳಪ್ಪನ ಶೌರ್ಯ, ಪರಾಕ್ರಮ ಕಿತ್ತೂರು ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ. ಆದರೆ, ಬಾಳಪ್ಪನಿಗೆ ಸಿಗಬೇಕಾದ ಗೌರವ ಮತ್ತು ಪ್ರಚಾರ ಸಿಗದೇ ಇರುವುದು ವಿಪರ್ಯಾಸದ ಸಂಗತಿ.
ಇತಿಹಾಸ ಸಂಶೋಧಕ ಮಹೇಶ ಚನ್ನಂಗಿ ಅವರು ಈ ಕುರಿತು ‘ಸುವರ್ಣ ಸಮಾಚಾರ’ ಜೊತೆಮಾತನಾಡಿ, ಮೊದಲ ಯುದ್ಧದಲ್ಲಿ ಐಸಿಎಸ್ ಅಧಿಕಾರಿ ಥ್ಯಾಕರೆಯನ್ನು ಅಮಟೂರ ಬಾಳಪ್ಪ ಗುಂಡಿಕ್ಕಿ ಕೊಲ್ಲುತ್ತಾರೆ. ಹಾಗಾಗಿ, ಇಂದು ನಾವೆಲ್ಲಾ 200ನೇ ಕಿತ್ತೂರು ರಾಣಿ ಚನ್ನಮ್ಮನ ವಿಜಯೋತ್ಸವ ವಿಜೃಂಭಣೆಯಿಂದ ಆಚರಿಸುವಂತಾಗಿದೆ. ಥ್ಯಾಕರೆ ಹತ್ಯೆಯಿಂದ ಸಿಟ್ಟಿಗೆದ್ದಿದ್ದ ಬ್ರಿಟಿಷರು ಕಿತ್ತೂರಿನ ಮೇಲೆ ಮತ್ತೆ ಯುದ್ಧ ಸಾರುತ್ತಾರೆ. 1824ರ ನವೆಂಬರ್ 30ರಿಂದ ಡಿಸೆಂಬರ್ 5ರ ವರೆಗೆ ನಡೆದ 2ನೇ ಯುದ್ಧದಲ್ಲಿ ಡಿ.4ರಂದು ಕಿತ್ತೂರಿನ ಗಡಾದಮರಡಿ ವಶಕ್ಕೆ ಪಡೆಯುವ ವೇಳೆ ಬ್ರಿಟಿಷ್ ಅಧಿಕಾರಿ ಚಾಪ್ಲಿನ್ ಬಂದೂಕಿನ ನಳಿಗೆಯಿಂದ ಹೊರ ಬಂದ ಗುಂಡಿನಿಂದ ಬಾಳಪ್ಪ ವೀರ ಮರಣವನ್ನಪ್ಪುತ್ತಾರೆ. ತನ್ನ ಕೊನೆಯುಸಿರು ಇರೋವರೆಗೂ ಕಿತ್ತೂರಿಗಾಗಿ ಕಾದಾಡಿದ ವೀರಕೇಸರಿ ಬಾಳಪ್ಪ ಎಂದೆಂದೂ ಚಿರಸ್ಥಾಯಿ ಎಂದು ತಿಳಿಸಿದರು.
200ನೇ ಕಿತ್ತೂರು ವಿಜಯೋತ್ಸವಕ್ಕೆ ಕಾರಣಿಕರ್ತನಾಗಿರುವ ಅಮಟೂರ ಬಾಳಪ್ಪನಿಗೆ ಈ ಬಾರಿಯ ಉತ್ಸವದಲ್ಲಿ ವಿಶೇಷ ಗೌರವ ಸಿಗಬೇಕು. ಆತನ ಹುಟ್ಟೂರು ಬೈಲಹೊಂಗಲ ತಾಲ್ಲೂಕಿನ ಅಮಟೂರ ಗ್ರಾಮದಲ್ಲೂ ಕಾರ್ಯಕ್ರಮ ಆಯೋಜಿಸಬೇಕು ಅನ್ನುವುದು ಅಭಿಮಾನಿಗಳ ಒತ್ತಾಸೆಯಾಗಿದೆ.
ಅಮಟೂರನ್ನು ಕಿತ್ತೂರು ನಾಡ ಪಾರಂಪರಿಕ ಅಭಿವೃದ್ಧಿಗೊಳ್ಳುವ ಪ್ರದೇಶವೆಂದು ಸರ್ಕಾರ ಘೋಷಿಸಬೇಕು. ಅಮಟೂರ ಗ್ರಾಮದ ಹೆಸರನ್ನು ಬಾಳಪ್ಪನ ಅಮಟೂರ ಎಂದು ಮರು ನಾಮಕರಣ ಮಾಡಬೇಕು. ಗ್ರಾಮದಲ್ಲಿರುವ ಶಾಲೆ, ಕೃಷಿಪತ್ತಿನ ಸಹಕಾರಿ ಸಂಘ, ಗ್ರಂಥಾಲಯ ಸೇರಿ ಮತ್ತಿತರ ಸಂಸ್ಥೆಗಳಿಗೆ ಬಾಳಪ್ಪನವರ ಹೆಸರಿಡಬೇಕು. ಹೀಗೆ ಗೌರವ ಸಲ್ಲಿಸುವ ಮೂಲಕ ಬಾಳಪ್ಪನವರನ್ನು ಅಜರಾಮರಗೊಳಿಸಬೇಕು ಎಂಬುದು ಅವರ ಅಭಿಮಾನಿಗಳ ಆಗ್ರಹವಾಗಿದೆ.