
ಚನ್ನಮ್ಮನ ಕಿತ್ತೂರು, ಅಕ್ಟೋಬರ್ 14: 200ನೇ ಕಿತ್ತೂರು ವಿಜಯೋತ್ಸವಕ್ಕೆ ಸಕಲ ಸಿದ್ದತೆಗಳು ಭರದಿಂದ ಸಾಗಿದ್ದು ಇಡೀ ರಾಜ್ಯಾದ್ಯಂತ ಲಕ್ಷಾಂತರ ಸ್ವಾಭಿಮಾನಿ ಕನ್ನಡಿಗರು ಚನ್ನಮ್ಮಾಜಿ ಅಭಿಮಾನಿಗಳು ಇದೇ ಅಕ್ಟೋಬರ್ 23 ರಿಂದ ಮೂರು ದಿನಗಳ ಕಾಲ ಜರುಗಲಿರುವ ಕಿತ್ತೂರು ಉತ್ಸವದಲ್ಲಿ ಭಾಗಿಯಾಗಲಿದ್ದಾರೆ.
ಈಗಾಗಲೇ ಕಿತ್ತೂರು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಸೇತುವೆ ತಳಭಾಗದಲ್ಲಿ ಕಿತ್ತೂರು ಉತ್ಸವಕ್ಕೆ ಸ್ವಾಗತ ಎಂಬ ವರ್ಣಾಲಂಕಾರದ ಸ್ವಾಗತ ಕಮಾನು ಮತ್ತು ಬ್ರಿಡ್ಜ್ ಗೋಡೆಗೆ ಚನ್ನಮ್ಮಾಜಿಯ ವರ್ಣಚಿತ್ರ ಕಣ್ಮನ ಸೆಳೆಯುತ್ತಿದೆ.
ಈ ಬಾರಿ ಉತ್ಸವಕ್ಕೆ ಗಣ್ಯ ಮಾನ್ಯರು ಆಗಮಿಸುವ ಹಿನ್ನೆಲೆಯಲ್ಲಿ ಸ್ಥಳೀಯ ಯುವ ಉತ್ಸಾಹಿ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಚನ್ನಮ್ಮ ವೃತ್ತದಲ್ಲಿನ ಚನ್ನಮ್ಮಾಜಿಯ ಕಂಚಿನ ಮೂರ್ತಿಗೆ ಅಲ್ಲಲ್ಲಿ ಸಣ್ಣ ಪುಟ್ಟ ದೋಷಗಳಾಗಿದ್ದು, ಹಾನಿಗೊಂಡಿರು ಮೂರ್ತಿಯ ಸೂಕ್ಷ್ಮ ಮೇಲ್ಮೈ ಸರಿಪಡಿಸಿ ಹೊಳೆಯುವಂತೆ ಮಾಡಿ ಬಂಗಾರದ ಬಣ್ಣ ಬಳಿಸುವ ಮೂಲಕ ಆಕರ್ಷಕವಾಗಿ ಕಾಣುವಂತೆ ಮಾಡಲು ನಿರ್ಧರಿಸಿದ್ದಾರೆ.
ಈ ಬಗ್ಗೆ ವಿಶೇಷ ಗಮನ ಹರಿಸಿದ ಶಾಸಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಈಗಾಗಲೇ ಮೂರ್ತಿಗೆ ಹೊಸ ಮೆರುಗನ್ನು ನೀಡಲು ಚಾಲನೆ ನೀಡಿದ್ದಾರೆ. ನಾಲ್ಕು ದಿನಗಳಿಂದ ಕೆಲಸ ನಡೆದಿದ್ದು ಮುಂದಿನ ಎರಡು ದಿನಗಳಲ್ಲಿ ಮೂರ್ತಿಯ ಹೊಳಪಿನ ಕೆಲಸ ಪೂರ್ಣಗೊಳ್ಳಲಿದೆ. ಈ ವರೆಗೂ ಯಾರೂ ಗಮನಿಸದ ಸೂಕ್ಷ್ಮ ಸಂಗತಿ ಅರಿತು ಮೂರ್ತಿಗೆ ಹೊಸ ಹೊಳಪು ನೀಡಲು ಸನ್ನದ್ದರಾಗಿರುವ ಶಾಸಕರ ಕಾರ್ಯವೈಖರಿಗೆ ಕಿತ್ತೂರು ಜನತೆ ಶಹಬ್ಬಾಷ್ ಎನ್ನುತ್ತಿದ್ದಾರೆ.