ಧಾರವಾಡ, ಜನವರಿ 26: ಇನ್‌ಸ್ಟಾಗ್ರಾಮ್ ಪ್ರೀತಿಗೆ ಮನಸೋತು ಮೋಸ ಹೋದ ಮದುವೆಯಾದ ಮಹಿಳೆಯೊಬ್ಬಳು ಇತ್ತ ಪ್ರಿಯಕರನೂ ಇಲ್ಲದೇ ಅತ್ತ ಗಂಡನೂ ಇಲ್ಲದೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಆಘಾತಕಾರಿ ಘಟನೆ ಧಾರವಾಡದಲ್ಲಿ ಶುಕ್ರವಾರ ನಡೆದಿದೆ. ಶ್ವೇತಾ ಗುಡದಾಪುರ (24) ಆತ್ಮಹತ್ಯೆ ಮಾಡಿಕೊಂಡವಳು.
ಮೂಲತಃ ಗಜೇಂದ್ರಗಡದವಳಾದ ಶ್ವೇತಾಳನ್ನು ರಾಮದುರ್ಗ ಮೂಲದ ವಿಶ್ವನಾಥ್ ಎಂಬಾತನ ಜೊತೆಗೆ ಕಳೆದ 4-5 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿ ಮಧ್ಯೆ ಬಿರುಕು ತಂದಿಟ್ಟಿದ್ದ ಇನ್‌ಸ್ಟಾಗ್ರಾಮ್ ಪ್ರೀತಿ. ಮದುವೆಯಾದ ಬಳಿಕ ಶ್ವೇತಾ ಇನ್‌ಸ್ಟಾಗ್ರಾಮ್ ಪ್ರೀತಿಗೆ ಮರುಳಾಗಿದ್ದಳು. ಧಾರವಾಡ ಮೂಲದ ಯುವಕನ ಇನ್‌ಸ್ಟಾಗ್ರಾಮ್ ಪ್ರೀತಿಗೆ ಮನಸೋತ ಶ್ವೇತಾ ನೇಣಿಗೆ ಶರಣಾಗಿದ್ದಾಳೆ.
ತನ್ನ ಇನ್‌ಸ್ಟಾಗ್ರಾಮ್ ಪ್ರಿಯಕರನನ್ನು ನಂಬಿ ಶ್ವೇತಾ ಗಂಡನಿಗೆ ಗೊತ್ತಾಗದಂತೆ ಮನೆಬಿಟ್ಟು ಧಾರವಾಡಕ್ಕೆ ಬಂದಿದ್ದಳಂತೆ. ಕಳೆದ ಒಂದೂವರೆ ವರ್ಷದಿಂದ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಆಕೆ ಧಾರವಾಡದಲ್ಲೇ ವಾಸವಾಗಿದ್ದಳಂತೆ. ಧಾರವಾಡದಲ್ಲಿದ್ದುಕೊಂಡೇ ತನ್ನ ಪತಿಗೆ ಆಕೆ ವಿಚ್ಛೇದನದ ನೋಟಿಸ್ ಸಹ ಕಳುಹಿಸಿದ್ದಳಂತೆ.
ಪ್ರೀತಿ-ಪ್ರೇಮವೆಂದು ತಲೆ ಕೆಡಿಸಿದ್ದ ಆಕೆಯ ಪ್ರಿಯಕರ ಗಂಡನಿಂದ ದೂರ ಮಾಡಿದ್ದ. ಆಕೆಯನ್ನು ಕರೆದುಕೊಂಡು ಬಂದು ಶ್ರೀನಗರ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿಟ್ಟಿದ್ದನಂತೆ. ಆಕೆಯನ್ನು ಮದುವೆಯಾಗುತ್ತೇನೆ ಅಂತಾ ಹೇಳಿ ನಂಬಿಸಿದ್ದನಂತೆ. ತನ್ನ ಪತ್ನಿಯನ್ನ ಕರೆದುಕೊಂಡು ಹೋಗಲು ಪತಿ ವಿಶ್ವನಾಥ್ ಹಾಗೂ ಶ್ವೇತಾಳ ಪಾಲಕರು ಬಂದಾಗ ಅವರಿಗೆ ಬೆದರಿಕೆ ಹಾಕಿ ವಾಪಸ್ ಕಳುಹಿಸಿದ್ದನಂತೆ. ಈ ಬಗ್ಗೆ ಸ್ವತಃ ಶ್ವೇತಾಳ ತಾಯಿ ಶಶಿ ಸಾವಂತ ಅವರೇ ದೂರು ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಯ ನಂತರ ಶ್ವೇತಾ ತಾನಿದ್ದ ಬಾಡಿಗೆ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ.
ನೇಣಿಗೆ ಶರಣಾಗಿದ್ದ ಪತ್ನಿಯ ಶವವನ್ನ ಕಂಡು ಪತಿ ವಿಶ್ವನಾಥ್ ಮಮ್ಮಲ ಮರುಗಿದ್ದಾನೆ. ಶ್ವೇತಾಳ ಪ್ರಿಯಕರ ಧಾರವಾಡದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಆಕೆಯ ಖರ್ಚು, ವೆಚ್ಚ ನೋಡಿಕೊಂಡಿದ್ದನಂತೆ. ಆದರೆ ಇವರಿಬ್ಬರ ಮಧ್ಯೆ ಏನೋ ಕಲಹ ಉಂಟಾಗಿದೆ. ಇದರಿಂದ ಮನನೊಂದು ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಲಾಗಿದೆ.
ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡು ಆಕೆಯ ಪೋಷಕರು ಗೋಳಾಡಿದ್ದಾರೆ. ಇನ್‌ಸ್ಟ್ರಾಗ್ರಾಮ್‌ನ ಕುರುಡು ಪ್ರೀತಿಗೆ ಮನಸೋತ ಶ್ವೇತಾ ಗಂಡನೂ ಇಲ್ಲ, ಪ್ರಿಯಕರನೂ ಇಲ್ಲದೇ ಚಿಕ್ಕ ವಯಸ್ಸಿನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಬಗ್ಗೆ ಶ್ವೇತಾಳ ಪೋಷಕರು ಶಿವಳ್ಳಿ ಮೂಲದ ಯುವಕನ ವಿರುದ್ಧ ಧಾರವಾಡ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.