Home ವಿಶೇಷ ವಚನಕಾರ ಸೊನ್ನಲಿಗೆ ಸಿದ್ಧರಾಮನ ನೆನೆಯೋಣ

ವಚನಕಾರ ಸೊನ್ನಲಿಗೆ ಸಿದ್ಧರಾಮನ ನೆನೆಯೋಣ

0
ವಚನಕಾರ ಸೊನ್ನಲಿಗೆ ಸಿದ್ಧರಾಮನ ನೆನೆಯೋಣ

ಇಂದು ಸೊನ್ನಲಿಗೆ ಸಿದ್ಧರಾಮನ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ನೆಪದಲ್ಲಿ ಸಿದ್ಧರಾಮನನ್ನು ಚೂರು ನೆನೆಯೋಣ. ಈತನಕ 1965 ವಚನಗಳು ಲಭ್ಯವಾಗಿವೆ. ಸೊನ್ನಲಿಗೆ ಸಿದ್ಧರಾಮನ ಬಗೆಗೆ ಹಲವು ಅಧ್ಯಯನಗಳು ನಡೆದಿವೆ. ಕಾಯಕಜೀವಿಯಾದ ಈತ 12 ನೇ ಶತಮಾನದಲ್ಲಿ ಶರಣರ ಬಳಗದಲ್ಲಿ ಇದ್ದಾತ.

ಈತನನ್ನು ಸಿದ್ದರಾಮ, ಸಿದ್ದರಾಮೇಶ್ವರ ಎಂದು ಕರೆಯಲಾಗುತ್ತಿದೆ‌. ಕೆರೆಕಟ್ಟೆ, ಬಾವಿ,ಅರವಟ್ಟಿಗೆ ತೋಡುವ ಕಾಯಕ‌ ಮಾಡುತ್ತಲೇ ಸುತ್ತಲ ಸಮಾಜವನ್ನು ನೋಡಿ ಅನುಭವದಿಂದ ಕೆಲವು ಮಾತುಗಳನ್ನು ಆಡಿದ. ಆ ಮಾತುಗಳೆ ವಚನಗಳಾಗಿವೆ. ಸೊನ್ನಲಿಗೆ ಅಥವಾ ಸೊನ್ನಲಾಪುರದ ಪರಿಸರದಲ್ಲಿ ಜೀವಿಸಿದ್ದ ಬಗ್ಗೆ ಆತನ ವಚನಗಳಿಂದ ತಿಳಿಯುತ್ತದೆ.

ಕಪಿಲಸಿದ್ಧಮಲ್ಲಿಕಾರ್ಜುನಾ / ಕಪಿಲಸಿದ್ಧಮಲ್ಲಿಕಾರ್ಜನಲಿಂಗ ಎಂಬ ಅಂಕಿತದಲ್ಲಿ ವಚನಗಳನ್ನು ಬರೆದಿದ್ದಾರೆ. ಸೊನ್ನಲಿಗೆ ಸಿದ್ಧರಾಮ ನಡೆ-ನುಡಿ ಒಂದಾಗಿರಬೇಕು ಎನ್ನುವ ಬಗ್ಗೆಯೇ ಹಲವು ವಚನಗಳನ್ನು ಬರೆದಿದ್ದಾನೆ.

ಕೆಲವು ವಚನಗಳನ್ನು ನೋಡುವುದಾದರೆ:

ನಡೆನುಡಿಗಳೊಂದಾದವರಿಗೊಲಿವೆ ಕಂಡಯ್ಯಾ ನುಡಿಯೆ ಬ್ರಹ್ಮವಾದವರ ನೀನೊಲ್ಲೆಯಯ್ಯ ಮೃಡನೆ, ಕಪಿಲಸಿದ್ಧಮಲ್ಲಿಕಾರ್ಜುನಲಿಂಗ ನುಡಿಯ ಬ್ರಹ್ಮಂಗಳಿಂದಪ್ಪುದೇನೊ

ಜನರನ್ನು ಮರಳುಗೊಳಿಸುವ ಮಾತುಗಳಿಂದ ಯಾವ ಪ್ರಯೋಜನವೂ ಇಲ್ಲ. ವಾದದಲ್ಲಿ ಗೆಲ್ಲಬೇಕೆಂಬ ತರ್ಕದ ಮಾತುಗಳಿಂದಲೂ ಪ್ರಯೋಜನವಿಲ್ಲ.ಬರಿ ಒಣ ಮಾತುಗಳಿಂದ ಜನರ ಮನ ಗೆಲ್ಲಲು ಪ್ರಯತ್ನಿಸದೆ ತಾನು ಆಡುವ ಮಾತುಗಳಂತೆ ನಡೆಯಬೇಕು. ನುಡಿದಂತೆ ನಡೆಯಬೇಕು ಎಂದು ಸಿದ್ಧರಾಮ ಹೇಳುತ್ತಾನೆ.

ನುಡಿಯಬಹುದು ಅದ್ವೈತವನೊಂದು ಕೋಟಿ ವೇಳೆ ಒಮ್ಮೆ ನಡೆಯಬಹುದೆ ನಿರ್ಧರವಾಗಿ ಸದ್ಭಕ್ತಿ ಸದಾಚಾರವ ನುಡಿದಂತೆ ನಡೆವ ನಡೆದಂತೆ ನುಡಿವ ಸದ್ಭಕ್ತಿ ಸದಾಚಾರಯುಕ್ತರ ಮಹಾತ್ಮರ ಪಾದವ ಹಿಡಿದು ಬದುಕಿಸಯ್ಯಾ ಪ್ರಭುವೆ ಕಪಿಲಸಿದ್ಧ ಮಲ್ಲಿಕಾರ್ಜುನಾ.

ಈ ವಚನದಲ್ಲೂ ನಡೆ-ನುಡಿ ಒಂದಾಗಬೇಕಾದ ಜವಾಬ್ದಾರಿಯ ಬಗ್ಗೆ ಮಾತನಾಡುತ್ತಾನೆ. ಒಳ್ಳೆಯ ಮಾತು ಮತ್ತು ನಡವಳಿಕೆಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನು ಆಡಿ ಪ್ರಯೋಜನವಿಲ್ಲ. ಜೀವಾತ್ಮ ಪರಮಾತ್ಮ ಎರಡೂ ಹೇಗೆ ಬೇರೆಯಲ್ಲದ ಬೆಸುಗೆಯೋ ಹಾಗೆಯೇ ನಡೆ-ನುಡಿ ಬೇರೆಯಲ್ಲದ ಬೆಸುಗೆಯಾಗಬೇಕು. ಒಳ್ಳೆಯ ನಡೆ ನುಡಿ ಒಂದಾಗುವುದರಲ್ಲಿ ದೇವರನ್ನು ಕಾಣಬೇಕೇ ವಿನಹಃ ಗುಡಿ ಗುಂಡಾರಗಳಲ್ಲಿ ಅಲ್ಲ ಮೊದಲು ಒಳ್ಳೆಯ ಕೆಲಸವನ್ನು ಮಾಡಿ, ತದನಂತರ ಹೀಗೆ ಮಾಡಿದ ಬಗೆಗೆ ಮಾಡಿದ ಕೆಲಸವನ್ನು ತೋರಿಸಿ ಮಾತನಾಡು ಎನ್ನುವುದು ಸಿದ್ಧರಾಮನ ನಿಲುವು.

ವೇಷದಲ್ಲಿ ಭಕ್ತನಾದಡೇನು ವೇಷದಲ್ಲಿ ಮಹೇಶನಾದಡೇನು ಗುಣವಿಲ್ಲದನ್ನಕ್ಕರ ಕ್ಷೀರಕ್ಕೂ ತಕ್ರಕ್ಕೂ ಭೇದವೇನುಂಟು ರುಚಿಯಿಂದಲ್ಲದೆ ರೂಪದಿಂದವೆ ಕಪಿಲಸಿದ್ಧ ಮಲ್ಲಿಕಾರ್ಜುನಾ.

ಮೊಸರು (ತಕ್ರ) ಹಾಲು (ಕ್ಷೀರ) ನೋಡುವುದಕ್ಕೆ ಎರಡೂ ಬೆಳ್ಳಗೆ ಕಾಣುತ್ತವೆ. ಆದರೆ ಅವುಗಳ ವ್ಯತ್ಯಾಸ ಕಾಣುವುದು ಅವುಗಳ ರುಚಿ ನೋಡಿದ ಮೇಲಲ್ಲವೇ?ಹಾಗೆಯೇ ವ್ಯಕ್ತಿಗಳು ಮೇಲೆ ಒಳ್ಳೊಳ್ಳೆ ಬೆಳ್ಳನೆ ಬಟ್ಟೆ ತೊಟ್ಟರೇನು ಅವರ ವ್ಯತ್ಯಾಸ ಗೊತ್ತಾಗುವುದು ಅವರ ಗುಣದಿಂದಲ್ಲವೇ?ನಿಜದ ಭಕ್ತಿ ಇಲ್ಲದೆ ಭಕ್ತನ ವೇಷ ತೊಟ್ಟವರಿದ್ದಾರೆ, ದೇವ ಮಾನವರಂತೆ ವೇಷ ತೊಟ್ಟವರಿದ್ದಾರೆ.

ಆದರೆ ಅವರ ನಿಜದ ಬಣ್ಣ ಬಯಲಾಗುವುದು ಅವರ ನಡೆ-ನುಡಿಯಿಂದ. ಯಾರನ್ನೂ ಅವರು ತೊಟ್ಟ ಬಟ್ಟೆ ಅಲಂಕಾರದಿಂದ ಅಳೆಯಬಾರದು ಅವರು ಸಮಾಜದ ಒಳಿತಿಗಾಗಿ ಮಾಡಿದ ಕೆಲಸದಿಂದ ಅಳೆಯಬೇಕು ಎನ್ನುತ್ತಾರೆ.ನಡೆಗೂ ನುಡಿಗೂ ಸಂಬಂಧವಿಲ್ಲದಂತೆ ಬದುಕುವವರ ಸಂಖ್ಯೆಯೇ ಹೆಚ್ಚಾಗಿರುವ ಈ ಕಾಲಮಾನದಲ್ಲಿ, ವ್ಯಕ್ತಿ ಪ್ರತಿಷ್ಠೆಯ ಆತ್ಮರತಿಯೇ ವೈಭವೀಕರಣಗೊಳ್ಳುತ್ತಿರುವ ಈ ಕಾಲದಲ್ಲಿ, ಸೊನ್ನಲಿಗೆ ಸಿದ್ಧರಾಮನ ವಚನಗಳು ಜೀರ್ಣವಾಗುವುದು ಕಷ್ಟ. ಈ ವಚನಗಳ ಮೂಲಕವಾದರೂ ವಚನ ಪರಂಪರೆಯ ಬಗ್ಗೆ ಬರೀ ಮಾತನಾಡುವುದಲ್ಲ ಚೂರಾದರೂ ನಡೆಯಲ್ಲೂ ವಚನಗಳ ಇಳಿಸಿಕೊಳ್ಳಬೇಕು ಎನ್ನುವ ಅರಿವನ್ನಾದರೂ ಪಡೆಯಬೇಕಾಗಿದೆ.

ಅಜೋ

LEAVE A REPLY

Please enter your comment!
Please enter your name here