
ಚನ್ನಮ್ಮನ ಕಿತ್ತೂರು, ಅಕ್ಟೋಬರ್ 16: ತಾಲೂಕಿನ ಎಂ ಕೆ ಹುಬ್ಬಳ್ಳಿಯ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 2021ರ ಜು.26 ರಂದು ಬೆಳಗಾವಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕಿತ್ತೂರು ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಅವರು ಕಾರ್ಖಾನೆಯಿಂದ ಸಕ್ಕರೆ ಸಾಗಿಸುತ್ತಿದ್ದ 4 ಲಾರಿ ವಶಕ್ಕೆ ಪಡೆದು ಪರಿಶೀಲಿಸಿದಾಗ ಇನ್‌ವೈಸ್‌ನಲ್ಲಿ ನಮೂದಿಸಿದ್ದಕ್ಕಿಂತ ಹೆಚ್ಚು ಸಕ್ಕರೆ ಲಾರಿಗಳಲ್ಲಿ ಸಾಗಿಸಲಾಗುತ್ತಿತ್ತು ಎಂದು ವರದಿ ಸಲ್ಲಿಸಿದ್ದರು.
ಇನ್ನೂ ಹೆಚ್ಚುವರಿ ಸಕ್ಕರೆ ದಾಸ್ತಾನು ಕಾರ್ಖಾನೆಗೋದಾಮಿನಲ್ಲಿದೆ ಎಂದು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲು ಮಾಡಿರುವುದಿಲ್ಲ. ಇದನ್ನು ಖಂಡಿಸಿ ಹಾಗೂ ಕಾರ್ಖಾನೆಯಲ್ಲಿ ನಡೆದ ಅನೇಕ ಅವ್ಯವಹಾರಗಳ ಕುರಿತು ತನಿಖೆ ಮಾಡುವಂತೆ ಒತ್ತಾಯಿಸಿ ಅ. 18 ರಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾ ಸಂಘ (ಒಕ್ಕೂಟ)ದ ಪದಾಧಿಕಾರಿಗಳು ಕಿತ್ತೂರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಕಳೆದ ಎರಡು ವರ್ಷಗಳಿಂದ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾ ಸಂಘ (ಒಕ್ಕೂಟ)ದ ಪದಾಧಿಕಾರಿಗಳು, ಅನೇಕ ರೈತ ಸಂಘಟನೆಗಳು, ಶೇರುದಾರರು ಹಾಗೂ ಈ ಭಾಗದ ರೈತರು ಹೋರಾಟ ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಅ. 18 ರ ಒಳಗಾಗಿ ಬೆಳಗಾವಿ ಜಿಲ್ಲಾಡಳಿತ, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಥವಾ ಕಿತ್ತೂರು ತಾಲೂಕಾಡಳಿತ ಮಧ್ಯಸ್ಥಿಕೆ ವಹಿಸಿ 2021 ಜುಲೈ 26 ರ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ಮಾಡದ ತಹಶೀಲ್ದಾರ್, ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಕಾರ್ಖಾನೆ ಅಧಿ ಕಾರಿಗಳ ಮೇಲೆ ಎಫ್‌ಐಆರ್ ಮಾಡಿ ಉನ್ನತ ಮಟ್ಟದ ತನಿಖೆ ಮಾಡುವ ಭರವಸೆ ನೀಡಿದರೆ ಹೋರಾಟ ಹಿಂಪಡೆಯಲಾಗುವುದು ಎಂದು ಮನವಿಯಲ್ಲಿ ಹೇಳಲಾಗಿದೆ.
ಈ ವೇಳೆ ಮಹಾ ಒಕ್ಕೂಟದ ರಾಜ್ಯ ಅಧ್ಯಕ್ಷ ಭೀರಪ್ಪ ದೇಶನೂರ, ಬಸವರಾಜ ಮೋಕಾಶಿ, ರುದ್ರಪ್ಪ ಸಂಜೀವಕುಮಾರ ತಿಳಗರ, ಶಿವಾನಂದ ಜ್ಯೋತಿ, ಬಸನಗೌಡ ಪಾಟೀಲ, ಈರಣ್ಣ ಅಂಗಡಿ, ಮಹಾಂತೇಸ ಗೌರಿ ಸೇರಿದಂತೆ ಅನೇಕರು ಇದ್ದರು.