ಬೆಳಗಾವಿ: ತಾಲೂಕಿನ ಬಾಳೇಕುಂದ್ರಿಯಲ್ಲಿ ಬಸ್ ನಿರ್ವಾಹಕ ಮಹಾದೇವ ಹುಕ್ಕೇರಿ ಮೇಲಿನ ಹಲ್ಲೆ ಹಾಗೂ ಅವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ನಗರದ ರಾಣಿ ಚನ್ನಮ್ಮನ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ.ನಾರಾಯಣಗೌಡ, ಪ್ರವೀಣ ಶೆಟ್ಟಿ ಬಣಗಳ ಕಾರ್ಯಕರ್ತರು ಮಂಗಳವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.ಆರಂಭದಲ್ಲಿ ಪ್ರತಿಭಟನೆಗೆ ಮುಂದಾದ ಪ್ರವೀಣ ಶೆಟ್ಟಿ ಹಾಗೂ ಅವರ ಬಣದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಜಿಲ್ಲೆಯ ಬಾಳೆಕುಂದ್ರಿ ಬಸ್ ನಿಲ್ದಾಣದಲ್ಲಿ ಬಸ್ ಕಂಡಕ್ಟರ್ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣವೂ ಇಂದು ಪ್ರತಿಭಟನೆ ನಡೆಸಿತು. ಅಧ್ಯಕ್ಷ ಶೆಟ್ಟಿ ಮಾತಾಡಿ ಎಂಇಎಸ್ ಮತ್ತು ಶಿವಸೇನೆಯ ಗೂಂಡಾಗಳು ಹಲ್ಲೆ ನಡೆಸಿ ಪೋಕ್ಸೋ ಕೇಸ್ ಹಾಕಿದ್ದು ಕೇವಲ ಕಂಡಕ್ಟರ್ ಮೇಲೆ ಅಲ್ಲ, ಇಡೀ ಕರ್ನಾಟಕದ ಮೇಲೆ, ನಾವು ಕರ್ನಾಟಕದಲ್ಲಿದ್ದೀವೋ ಅಥವಾ ಬೇರೆ ರಾಜ್ಯದಲ್ಲಿದ್ದೀವೋ? ಮರಾಠೀ ಪುಂಡರು ಕನ್ನಡಿಗರ ಸ್ವಾಭಿಮಾನ ಹತ್ತಿಕ್ಕಲು ಬಿಡೋದಿಲ್ಲ, ಕಂಡಕ್ಟರ್ ವಿರುದ್ಧ ಹಾಕಿರುವ ಕೇಸನ್ನು ವಾಪಸ್ಸು ಪಡೆದಯಬೇಕು ಮತ್ತ್ತು ಅದನ್ನು ಹಾಕಿದ ಇನ್ಸ್ಪೆಕ್ಟರ್ನನ್ನು ಸಸ್ಪೆಂಡ್ ಮಾಡಬೇಕೆಂದು ಹೇಳಿದರು.
ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ, ಕಂಡಕ್ಟರ್ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ, ರಾತ್ರೋರಾತ್ರಿ ಅದನ್ನು ಮಾಡಿದ್ದು ಯಾರು? ಕಾಣದ ಕೈಗಳು ಇಲ್ಲಿ ಕೆಲಸ ಮಾಡಿವೆ, ಕೇಸನ್ನು ದಾಖಲು ಮಾಡಿರುವ ಪೊಲೀಸ್ ಇನ್ಸ್ಪೆಕ್ಟರ್ ಮುಖಕ್ಕೆ ಎರಡು ಬಿಗಿಯಬೇಕು, ಅದ್ಹೇಗೆ ಅವನು ಪೋಕ್ಸೋ ಕೇಸನ್ನು ದಾಖಲಿಸುತ್ತಾನೆ? ಅವನೇನು ಕನ್ನಡಿಗನೋ ಅಥವಾ ಮಹಾರಾಷ್ಟ್ರದವನೋ? ಪೊಲೀಸ್ ಕಮೀಷನರ್ ಕೂಡಲೇ ಕಂಡಕ್ಟರ್ ಮೇಲೆ ಹಾಕಿರುವ ಕೇಸನ್ನು ವಾಪಸ್ಸು ಪಡೆಯಬೇಕು ಮತ್ತು ಗೃಹ ಸಚಿವರು ತಮ್ಮ ರಾಜಕೀಯ ದೊಂಬರಾಟವನ್ನು ಪಕ್ಕಕ್ಕಿಟ್ಟು ಬೆಳಗಾವಿ ಕನ್ನಡಿಗರ ಬಗ್ಗೆ ಯೋಚಿಸಬೇಕು ಎಂದು ಹೇಳಿದರು.