
ಬೆಂಗಳೂರು: ‘ವೈಚಾರಿಕತೆ ಅನ್ನೋದು ಸಂಪ್ರದಾಯ ವಿರೋಧಿಸುವುದಲ್ಲ ವಾಸ್ತವದಲ್ಲಿ ಸಂಪ್ರದಾಯದ ಹೆಸರಲ್ಲಿ ಮೂಢನಂಬಿಕೆಗಳನ್ನು ವಿರೋಧಿಸುವುದು, ಮನುಷ್ಯತ್ವ ಉಳಿಸುವುದೇ ನಿಜವಾದ ವೈಚಾರಿಕತೆ ಎಂದು ಬೈಲೂರಿನ ನಿಷ್ಕಲ ಮಂಟಪದ ಪೂಜ್ಯ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ನಗರದಲ್ಲಿ ಶುಕ್ರವಾರ ಡಾ.ಬಿ.ಟಿ.ಲಲಿತಾ ನಾಯಕ್ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಉದ್ಘಾಟಿಸಿ ಅವರು ಮಾತನಾಡಿದ ಅವರು ಅತಿಯಾದ ವೈಚಾರಿಕತೆ ಮನುಷ್ಯರನ್ನು ಸ್ವೇಚ್ಛಾಚಾರಕ್ಕೆ ತೆಗೆದುಕೊಂಡು ಹೋಗುತ್ತದೆ ಮತ್ತು ಅತಿಯಾದ ಮೂಢನಂಬಿಕೆ ಮನುಷ್ಯನನ್ನು ಅಧಃಪತನಕ್ಕೆ ಕರೆದೊಯ್ಯುತ್ತದೆ. ಮಾತೃ ಹೃದಯದ ಮನೋಭಾವ ಇರುವಂತಹ ವ್ಯಕ್ತಿಗಳು ಮಾತ್ರ ಸುಂದರ ಸಮಾಜವನ್ನು ಕಟ್ಟಲು ಸಾಧ್ಯ. ಅಂತಹ ಹೃದಯ ಮನುಷ್ಯನಿಗೆ ಬಹಳ ಮುಖ್ಯ’ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನಿಜಗುಣಾನಂದ ಶ್ರೀಗಳು ಟ್ರಸ್ಟ್‌ನ ಲಾಂಛನ ಲೋಕಾರ್ಪಣೆ ಮಾಡಿದರು. ಈ ವೇಳೆ ಟ್ರಸ್ಟ್‌ನ ಖಜಾಂಚಿ ಓಂ ಪ್ರಕಾಶ್, ಸದಸ್ಯರಾದ ಶಿವು, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಘಟಕದ ಅಧ್ಯಕ್ಷ ಎಂ. ವೆಂಕಟಸ್ವಾಮಿ, ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಮನು ಬಳಿಗಾರ್ ಮತ್ತು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್ ಇತರರು ಉಪಸ್ಥಿತರಿದ್ದರು
ಈ ಸಮಾಜದಲ್ಲಿ ಧರ್ಮ ಮತ್ತು ದೇವರ ಬಗ್ಗೆ ಸ್ಪಷ್ಟೀಕರಣದ ಅಗತ್ಯವಿದೆ ಅಲ್ಲದೇ ಧರ್ಮಕ್ಕಿಂತ ಮಿಗಿಲಾಗಿ ಅನ್ನ, ಅಕ್ಷರ, ಅರಿವು, ಔಷಧ ಹಾಗೂ ಆಶ್ರಯ ಮೂಲಭೂತವಾಗಿ ಒದಗಿಸಬೇಕಿದೆ ಇದನ್ನೇ ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಹೇಳಿದ್ದರು ಅಂತ ಅಭಿಪ್ರಾಯಪಟ್ಟರು.
‘ದಕ್ಷ ಆಡಳಿತದ ಸ್ವರೂಪ’ ಎಂಬ ವಿಷಯದ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಮಾತನಾಡಿದರು. ಟ್ರಸ್ಟ್‌ನ ಸಂಸ್ಥಾಪನಾ ಅಧ್ಯಕ್ಷೆ ಎಸ್.ಎಲ್. ಉಮಾದೇವಿ ಅವರು ಟ್ರಸ್ಟ್ ಸ್ಥಾಪನೆಯ ಉದ್ದೇಶಗಳನ್ನು ವಿವರಿಸಿದರು.