ಬೆಂಗಳೂರು ಮಾರ್ಚ್ 7: ಸಿಎಂ ಸಿದ್ದರಾಮಯ್ಯ ಇಂದು ತಮ್ಮ 16ನೇ ಬಜೆಟ್ ಮಂಡನೆಯ ವೇಳೆ ಕೆಲವರಿಗೆ ಸಿಹಿ ನೀಡಿದರೆ ಕೆಲವರಿಗೆ ಕಹಿ ಸುದ್ದಿಗಳನ್ನು ನೀಡಿದ್ದಾರೆ.
ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಕುಳಿತುಕೊಂಡು ಬಜೆಟ್ ಮಂಡನೆ ಮಾಡಿದರು. ಬಜೆಟ್‌ನಲ್ಲಿ ಜನತೆ ಪಾಲಿಗೆ ಸಿಹಿ ಮಾತ್ರ ನೀಡಬೇಕು ಎಂಬ ಉದ್ದೇಶವಿದ್ದರೂ ಗ್ಯಾರಂಟಿಗಳ ಹೊರೆ, ಬದ್ಧತಾ ವೆಚ್ಚ ಹೆಚ್ಚಳ, ಸಾಲದ ಹೊರೆ ನಡುವೆಯೂ ಅಭಿವೃದ್ಧಿಗೆ ಒತ್ತು ನೀಡಬೇಕಾದ ಅನಿವಾರ್ಯತೆಯಿಂದಾಗಿ ಮದ್ಯ ಪ್ರಿಯರಿಗೆ ಈ ಬಾರಿ ಬಜೆಟ್ ಕಹಿಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ 36,500 ಕೋಟಿ ರೂ. ಆದಾಯದ ಗುರಿ ನಿಗದಿ ಮಾಡಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಮದ್ಯದ ಬೆಲೆ ಏರಿಕೆಯಾಗಲಿದೆ. ರಾಜ್ಯ ಸರ್ಕಾರ ಅಬಕಾರಿ ಸ್ಲ್ಯಾಬ್ ಪರಿಷ್ಕರಣೆಗೆ ನಿರ್ಧರಿಸಿದೆ ಎಂದು ಬಜೆಟ್ ಭಾಷಣದಲ್ಲಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.