
ಬೆಳಗಾವಿ, ಡಿಸೆಂಬರ್ 01: ರಾಜ್ಯದ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ನೀಡುವ ಮೂಲಕ ಸಮಾಜದ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಮುಂದಾಗಬೇಕು ಇದು ಭವಿಷ್ಯದ ಸಮುದಾಯಕ್ಕೆ ನಾವು ಕೊಡಬಹುದಾದ ದೊಡ್ಡ ಉಡುಗೊರೆ ಅಂತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಶುರುವಾದ ಹೋರಾಟಕ್ಕೆ ಇದೀಗ ಮೂರು ಮುಕ್ಕಾಲು ವರ್ಷ.
ಕಳೆದ ಮೂರು ವರ್ಷಗಳಿಂದ ಶುರುವಾದ ಈ ಹೋರಾಟ ರಾಜ್ಯದಲ್ಲಿ ತುಂಬಾನೇ ಸದ್ದು ಮಾಡಿತ್ತು.ಕೂಡಲ ಸಂಗಮದ ಶ್ರೀಗಳ ನೇತೃತ್ವದಲ್ಲಿ ಪ್ರತಿ ಜಿಲ್ಲಾ ಮಟ್ಟದಲ್ಲಿ ಪಂಚಮಸಾಲಿ ಸಮುದಾಯದ ಮುಖಂಡರನ್ನು ಸಂಘಟಿಸಿ ಜಾಗೃತಿ ಮೂಡಿಸಿದ ಶ್ರೀಗಳು ಬೆಂಗಳೂರಿನ ವಿಧಾನಸೌಧದ ವರೆಗೂ ಪಾದಯಾತ್ರೆ ಮಾಡುವ ಮೂಲಕ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದರು.
ಎಲ್ಲಿಗೆ ಬಂತು ಸಂಗಯ್ಯ…ಹೌದು ಪಂಚಮಸಾಲಿ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಅನ್ನೋ ಹಾಗೆ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಪ್ರತಿಭಟನೆಯಿಂದ ತಪ್ಪಿಸಿಕೊಳ್ಳಲು ಮೂಗಿಗೆ ತುಪ್ಪ ಸವರುವ ರೀತಿಯಲ್ಲಿ ೨ಡಿ ನೀಡುವುದಾಗಿ ಘೋಷಿಸಿ ಕೈ ತೊಳೆದುಕೊಂಡಿದ್ದರು.
ಆಗ ಹಂಗ… ಈಗ ಹೀಂಗ… ಮುಂದಿನ್ಹ್ಯಾಂಗ?
ಹೌದು! ಶ್ರೀಗಳ ಪಾದಯಾತ್ರೆ ಸಂದರ್ಭದಲ್ಲಿ ಆಗಿನ ಪ್ರತಿಪಕ್ಷ ಕಾಂಗ್ರೆಸ್ ಪಂಚಮಸಾಲಿ ಮುಖಂಡರು ಇದೇ ಶ್ರೀಗಳ ಹೆಗಲಿಗೆ ಹೆಗಲಾಗಿ ೨ಎ ಮೀಸಲಾತಿಗೆ ಟೊಂಕ ಕಟ್ಟಿ ನಿಂತಿದ್ದರು. ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾದ ಲಕ್ಷ್ಮೀ ಹೆಬ್ಬಾಳಕರ, ಮಾಜಿ ಸಚಿವ ವಿನಯ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಇದೇ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿದ ಆಡಳಿತ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದರು.ಬಸನಗೌಡ ಪಾಟೀಲ್ ಯತ್ನಾಳ್, ನಿರಾಣಿ ಸಹೋದರರು ಸೇರಿದಂತೆ ಬಸವಜಯ ಮೃತ್ಯುಂಜಯ ಶ್ರೀಗಳ ಪರವಾಗಿ ನಿಂತು ಆಡಳಿತ ಪಕ್ಷದ ಶಾಸಕರಾಗಿದ್ದರೂ ಸಮುದಾಯದ ಹಿತಕ್ಕಾಗಿ ಸರ್ಕಾರವನ್ನು ಒತ್ತಾಯಿಸಿದ್ದರು. ಈಗ ಆಡಳಿತ ಪಕ್ಷದ ಸಚಿವರಾಗಿ ಶಾಸಕರಾಗಿರುವ ಇದೇ ಲಕ್ಷ್ಮೀ ಹೆಬ್ಬಾಳಕರ ವಿನಯ ಕುಲಕರ್ಣಿ ಮತ್ತು ವಿಜಯಾನಂದ ಕಾಶಪ್ಪನವರ ಮೀಸಲಾತಿ ಜಾರಿ ಮಾಡುವ ಬಗ್ಗೆ ಚಕಾರವೆತ್ತದೆ ಇರೋದು ಸಮುದಾಯದ ನಾಯಕರಿಗೆ ಅಸಮಾಧಾನ ಉಂಟು ಮಾಡಿದೆ.
ಬಂಗಾರದ ಬಳೆ ಗಿಫ್ಟ್ ಏನಾಯ್ತು?
ಸಿದ್ದರಾಮಯ್ಯ ಅವರು ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಖಂಡಿತವಾಗಿ ಮೀಸಲಾತಿ ಜಾರಿ ಮಾಡುತ್ತೇವೆ ಆಗ ಈ ತಂಗಿಗೆ ಉಡುಗೊರೆಯಾಗಿ ಬಂಗಾರದ ಬಳೆ ನೀಡುವಂತೆ ಬಹಿರಂಗವಾಗಿಯೇ ಹೇಳಿಕೆ ಕೊಟ್ಟ ಲಕ್ಷ್ಮೀ ಹೆಬ್ಬಾಳಕರ ಸದ್ಯ ಆಡಳಿತ ಪಕ್ಷದಲ್ಲಿ ಸಚಿವರಾಗಿದ್ದರೂ ಮೀಸಲಾತಿ ಪರ ಧ್ವನಿ ಎತ್ತಿಲ್ಲ ಅನ್ನೋದು ಪ್ರತಿಪಕ್ಷ ಬಿಜೆಪಿಯ ಆರೋಪವಾಗಿದೆ.
ಮೀಸಲಾತಿ ಕೋರಿ ಮತ್ತೇ ಮುತ್ತಿಗೆ ಫಿಕ್ಸ್
ಹೌದು! ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆಯುತ್ತ ಬಂದರೂ ಈ ವರೆಗೂ ಮೀಸಲಾತಿ ಜಾರಿ ಮಾಡದೇ ಇರುವುದು ಸ್ವತಃ ಬಸವಜಯ ಮೃತ್ಯುಂಜಯ ಶ್ರೀಗಳಿಗೆ ಬೇಸರವುಂಟು ಮಾಡಿದೆ. ಇದೇ ಕಾಂಗ್ರೆಸ್ ಮುಖಂಡರು ಮೀಸಲಾತಿ ಪರವಾಗಿ ತೋರಿದ ಕಾಳಜಿ ಈಗ ತೋರುತ್ತಿಲ್ಲ. ಒಂದು ಕಡೆ ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸೇರಿದಂತೆ ಭ್ರಷ್ಟಾಚಾರ ಮೊದಲಾದ ವಿಷಯಗಳು ಪ್ರತಿಪಕ್ಷ ಬಿಜೆಪಿಗೆ ಹೋರಾಟದ ಅಸ್ತ್ರಗಳಾಗಿದ್ದರೂ ಇತ್ತೀಚಿನ ಮೂರು ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಗೆಲುವು ಈ ಎಲ್ಲಕ್ಕೂ ತೆರೆ ಎಳೆದಂತಾಗಿದೆ. ಈ ಹಿನ್ನೆಲೆಯಲ್ಲಿ ಮೀಸಲಾತಿ ಪಡೆಯಲು ಹೋರಾಟ ಅನಿವಾರ್ಯ ಎಂದು ಶ್ರೀಗಳು ರಾಜ್ಯದಾದ್ಯಂತ ಪಂಚಮಸಾಲಿ ಸಂಘಟನೆ ಮಾಡಿ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸುರುವುದು ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಸಾಧ್ಯತೆ ಇದೆ. ಹೀಗಾಗಿ ಶ್ರೀಗಳ ಮನವೊಲಿಸಲು ಮುಖ್ಯಮಂತ್ರಿಗಳು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ವಿನಯ ಕುಲಕರ್ಣಿ ಅವರಿಗೆ ಟಾಸ್ಕ್ ನೀಡಿದ್ದರು ಎನ್ನಲಾಗಿದ್ದು ಈ ಸಂಧಾನ ವಿಫಲವಾಗಿದೆ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ವಿಜಯಾನಂದ ಕಾಶಪ್ಪನವರ ಅವರನ್ನು ಸಂಧಾನಕ್ಕೆ ಸಿಎಂ ಕಳುಹಿಸಿರುವುದಾಗಿ ತಿಳಿದು ಬಂದಿದೆ. ಆದರೂ ಶ್ರೀಗಳು ಮುತ್ತಿಗೆ ನಿರ್ಧಾರದಿಂದ ಹಿಂದೆ ಸೇರಿದಂತೆ ಕಾಣುತ್ತಿಲ್ಲ.
ಪಾಠ ಕಲಿಯಬೇಕಾದ್ದು ಸ್ವಾಮೀಜಿ ಮತ್ತು ಸಮಾಜ!
ರಾಜಕಾರಣದಲ್ಲಿ ಒಂದೇ ಸಮುದಾಯವನ್ನು ನೆಚ್ಚಿಕೊಂಡು ರಾಜಕೀಯದಲ್ಲಿ ಸಫಲವಾಗಲು ಸಾಧ್ಯವಿಲ್ಲ ಹೀಗಾಗಿ ಅಧಿಕಾರಕ್ಕೆ ಎಲ್ಲ ಸಮುದಾಯಗಳು ತಮ್ಮದೇಯಾದ ಕೊಡುಗೆ ನೀಡಿದ ಪರಿಣಾಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈಗ ಪಂಚಮಸಾಲಿ ಸಮುದಾಯಕ್ಕೆ ಮಾತ್ರ ಮೀಸಲಾತಿ ನಿಡುವುದು ಎಷ್ಟರ ಮಟ್ಟಿಗೆ ಸರಿ ಅನ್ನೋದು ಆಡಳಿತ ಪಕ್ಷದ ಎದುರಿಗಿರುವ ಪ್ರಶ್ನೆಯಾಗಿದೆ.
ಸಮುದಾಯದ ಶಾಸಕರು ಕೂಡ ಎಲ್ಲಾ ಸಮುದಾಯದ ಮತಗಳಿಂದ ಆಯ್ಕೆ ಆಗಿದ್ದು ಕೇವಲ ಒಂದೇ ಸಮುದಾಯದ ಓಲೈಕೆ ಮಾಡಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಗೆಲ್ಲೋದು ಡೌಟು ಹೀಗಾಗಿ ಅವರು ಕೂಡ ಶ್ರೀಗಳ ಜೊತೆಗಿದ್ದ ರೂಂ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಹಾಗಾಗಿದೆ. ಒಟ್ಟಿನಲ್ಲಿ ಪಕ್ಷಾತೀತವಾಗಿ ಸಮುದಾಯದ ಪರ ಹೋರಾಟಕ್ಕಿಳಿದ ಸ್ವಾಮೀಜಿಗಳನ್ನು ಆಗ ಕಾಂಗ್ರೆಸ್ ಸ್ವಾಮೀಜಿ ಅಂತಲೂ ಈಗ ಬಿಜೆಪಿ ಸ್ವಾಮಿ ಅಂತಲೂ ದೂಷಿಸುವ ರಾಜಕಾರಣಿಗಳಿಂದಾಗಿ ಬಡವಾಗಿದ್ದು ಮಾತ್ರ ಪಂಚಮಸಾಲಿ ಸಮುದಾಯ ಮತ್ತು ಸ್ವಾಮೀಜಿ.
ಒಟ್ಟಾರೆ ಮೂರು ವರ್ಷಗಳಿಂದಲೂ ಬೂದಿ ಮುಚ್ಚಿದ ಕೆಂಡದಂತಿರುವ ಮೀಸಲಾತಿ ಬೆಂಕಿ ಇದೀಗ ಜ್ವಾಲೆಯಾಗಿ ವ್ಯಾಪಿಸುವ ಸಾಧ್ಯತೆ ದಟ್ಟವಾಗಿದ್ದು ಸರ್ಕಾರ ಇದರಿಂದ ಹೇಗೆ ಪಾರಾಗುತ್ತೋ ಅನ್ನೋದು ಕುತೂಹಲ ಮೂಡಿಸಿದೆ. ಮೀಸಲಾತಿ ಅನ್ನೋ ಜೇನು ತುಪ್ಪ ಪಂಚಮಸಾಲಿ ಸಮುದಾಯಕ್ಕೆ ಸಿಗುತ್ತೋ ಇಲ್ಲವೋ ಕಾದು ನೋಡಬೇಕಿದೆ. ಚಳಿಗಾಲದಲ್ಲಿ ಮೀಸಲಾತಿ ಬೆಂಕಿಗೆ ಕಾಯಿಸಿಕೊಳ್ಳುವವರೂ ಇದ್ದಾರೆ ಸುಟ್ಟುಕೊಳ್ಳುವವರೂ ಇದ್ದಾರೆ. ಅಧಿವೇಶನದ ಕಾವಂತೂ ಪಕ್ಕಾ.