ಮೈಸೂರು, ನವೆಂಬರ್ 02 : ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಬಾಳೆ, ಟೊಮೆಟೊ, ತೆಂಗು ಮತ್ತು ತೇಗದ ಬೆಳೆ ನೆಲಕಚ್ಚಿದ್ದು, ರೈತರು ಕಂಗಾಲಾಗಿದ್ದಾರೆ.
ಹಲ್ಲರೆ ಗ್ರಾಮದ ರೈತ ಬಸವರಾಜು ಎಂಬುವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಟೊಮೆಟೊ ಮತ್ತು ತೆಂಗು ಬೆಳೆ, ರೈತ ಚೆನ್ನಪ್ಪ ಎಂಬುವರು ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಹಾಗೂ ರೈತ ಬಸವಣ್ಣ ಬೆಳೆದಿದ್ದ ತೇಗದ ಬೆಳೆ ನಾಶವಾಗಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ರೈತ ಬಸವರಾಜು ಮಾತನಾಡಿ, “ನಿನ್ನೆ ರಾತ್ರಿ ಗಾಳಿ – ಮಳೆಗೆ ಜಮೀನಿನಲ್ಲಿ ಬೆಳೆದಿದ್ದ ಟೊಮೆಟೊ ಬೆಳೆ ಹಾನಿಯಾಗಿದೆ. ಇದಿರಿಂದ ನಷ್ಟ ಉಂಟಾಗಿದೆ. ಜೊತೆಗೆ 8 ತೆಂಗಿನ ಮರ, 12 ತೇಗದ ಮರಗಳು ಸಹ ನೆಲಕಚ್ಚಿವೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು” ಎಂದು ಮನವಿ ಮಾಡಿದರು.