ದಡ್ಡಿ ಮೋದಗಾ ಜಾತ್ರೆ ಬರೀ ಬೆಳಗಾವಿ ಅಷ್ಟೇ ಅಲ್ಲದೇ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯದ ಬಹುತೇಕ ಕಡೆಗಳಲ್ಲಿ ಚಿರಪರಿಚಿತ!
ಹುಕ್ಕೇರಿ ತಾಲೂಕಿನ ದಡ್ಡಿ ಮೋದಗಾ ಶ್ರೀ ಭಾವಕೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಕಣ್ತುಂಬಿಕೊಳ್ಳಲು ರಾಜ್ಯ, ಹೊರ ರಾಜ್ಯಗಳಿಂದಲೂ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರುತ್ತಾರೆ. ಭಕ್ತಿಯಿಂದ ಭಾವಕೇಶ್ವರಿಯ ಅಡಿದಾವರೆಗೆ ಹಣಿಮಣಿದು ದೇವಿಗೆ ಕೃಪೆಗೆ ಪಾತ್ರರಾಗುತ್ತಾರೆ. ಇಂಥ ಸುಕ್ಷೇತ್ರದ ಜಾತ್ರಾ ಮಹೋತ್ಸವದಲ್ಲಿ ಪ್ರತಿ ವರ್ಷವೂ ಕುಟುಂಬ ಸಮೇತವಾಗಿ ಭಾಗಿಯಾಗುತ್ತಿದ್ದ ನಾನು ಫಾರ್ ದ ಫಸ್ಟ್ ಟೈಮ್ ಅದ್ದೂರಿ ಜಾತ್ರೆಯನ್ನು ಮಿಸ್ ಮಾಡಿಕೊಳ್ಳತ್ತಿದ್ದೀನಿ. ಸೋ ಐಮ್ ಫೀಲಿಂಗ್ ಸೋ ಸ್ಯಾಡ್!
ಅದಿರಲಿ ಬಿಡಿ, ಪ್ರತಿ ವರ್ಷವೂ ಫೆಬ್ರುವರಿಯಲ್ಲಿ ಗುಡಿ ಹುಣ್ಣಿಮೆಯ ಪವಿತ್ರ ಕ್ಷಣದಲಿರ ಜರುಗುವ ಭಾವಕೇಶ್ವರಿ ದೇವಿಯ ಜಾತ್ರೆ ಹಲವು ವಿಶೇಷತೆಗಳಿಂದ ಭಕ್ತಸಮೂಹವನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಹಲವು ದಶಕಗಳ ಮೊದಲು ಹಿರಿಯ ತಲೆಮಾರಿನವರು ಭಾವಕೇಶ್ವರಿ ಜಾತ್ರೆಗೆ ಹೋಗಿ ಬಂದರೆ ಅದೊಂದು ಅಪಶಕುನ ಸಂಪ್ರದಾಯ ಎಂದು ಅವರ ಮುಖ ನೋಡುತ್ತಿರಲಿಲ್ಲ, ಮನೆಯೊಳಗೂ ಸೇರಿಸಿಕೊಳ್ಳುತ್ತಿರಲಿಲ್ಲ ಅಂತ ಹೇಳುತ್ತಾರೆ. ಆದರೆ ದಿನಮಾನಗಳು ಉರುಳಿದಂತೆ ಹಳೆ ಪದ್ಧತಿಗಳೂ ಅಳಿದು ಶ್ರದ್ಧೆ, ಭಕ್ತಿಯ ಮಹಾಸಂಗಮ ದಡ್ಡಿ ಮೋದಗಾದ ಭಾವಕೇಶ್ವರಿ ಸನ್ನಿಧಾನದಲ್ಲಿ ನಳನಳಿಸುತ್ತಿದೆ!
ವರ್ಷಕ್ಕೊಮ್ಮೆ ಜಾತ್ರೆಯು ಎರಡು ದಿನಗಳ ಪರ್ಯಂತ ಜರುಗುತ್ತದೆ. ಪೂಜೆ,ಪುನಸ್ಕಾರದಂತಹ ವಿವಿಧ ಪೂಜಾ ವಿಧಾನಗಳ ಜೊತೆಗೆ ಭಕ್ತರು ದೇವಸ್ಥಾನದ ಸುತ್ತಲೂ ಇರುವ ಜಮೀನುಗಳಲ್ಲಿ ಒಲೆ ಹೂಡಿ ಅಲ್ಲೇ ಅಡುಗೆ ತಯಾರಿಸಿ, ಊಟ ಮಾಡುತ್ತಾರೆ. ಕುಟುಂಬದವರು, ಸ್ನೇಹಿತರು, ಸಂಬಂಧಿಕರು ಎಲ್ಲರೂ ಜೊತೆಗೂಡಿ ಊಟ ಮಾಡಿ ಸಂಭ್ರಮ ಪಡುತ್ತಾರೆ.
ಇದರ ಜೊತೆಗೆ ಯುವ ಸಮುದಾಯದ ಮೋಜು, ಮಸ್ತಿಗೂ ಜಾತ್ರೆ ಮತ್ತಷ್ಟೂ ಹುರುಪು ನೀಡುತ್ತದೆ. ಸ್ನೇಹಿತರ ಜೊತೆಗೂಡಿ ಜಾತ್ರೆಪೂರ್ತಿ ತಿರುಗಾಡುವುದು, ರಾತ್ರಿ ಹೊತ್ತಲ್ಲಿ ಅಲ್ಲಲ್ಲಿ ಫೈರ್ ಕ್ಯಾಂಪ್ ಹೂಡುವುದು ಯುವ ಸಮುದಾಯದ ಮನಸ್ಸಿಗೆ ಮುದ ನೀಡುತ್ತದೆ. ಇನ್ನು ಬಣ್ಣ ಬಣ್ಣದ ಬಟ್ಟೆ ತೊಟ್ಟು, ಬರುವ ಬೆಡಗಿಯರು, ಅಂದಗಾತಿಯ ಅಂದಕ್ಕೆ ಮಾರು ಹೋಗುವ ಹುಡುಗರು, ಯಾಕೆ ಬುಲ್ ಬುಲ್ ಮಾತಾಡಕ್ಕಿಲ್ಚ, ಅನ್ನುವ ಕಿಲಾಡಿಗಳು, ಲಂಗಾ ಧಾವಣ್ಯಾಗ್ ಮಸ್ತ್ ಕಾಣಸ್ತಿ ಲಾವಣ್ಯ ಅನ್ನುವ ಪೋಲಿಗಳು, ಕಣ್ಣಲ್ಲೇ ಶೂಟ್ ಮಾಡುವ ಹುಡುಗಿಯರು, ಮೂಗು ಮುರಿದು ಜಾರಿ ಹೋಗುವ ಜಾಣೆಯರು ಇವೆಲ್ಲವೂ ಪಡ್ಡೆ ಹುಡುಗರನ್ನು, ತುಂಟ ಹುಡುಗಿಯರನ್ನು ಜಾತ್ರೆಯಲ್ಲಿ ಇನ್ನಷ್ಟೂ ಬೂಸ್ಟ್‌ಅಪ್ ಮಾಡುತ್ತವೆ!
ಭಕ್ತಿಯನ್ನು ವೃದ್ಧಿಸುವ, ಬಂಧವನ್ನು ಬೆಸೆಯುವ, ಸಂಭ್ರಮವನ್ನು ಇಮ್ಮಡಿಗೊಳಿಸುವ ಜಾತ್ರೆಗಳು ವರ್ಷಕ್ಕೊಮ್ಮೆ ಮನುಷ್ಯರನ್ನು, ಮನಸ್ಸನ್ನು ಶುಚಿಗೊಳಿಸುತ್ತವೆ, ಅಂತಹ ಜಾತ್ರೆಗಳಲ್ಲಿ ಸುಕ್ಷೇತ್ರ ದಡ್ಡಿ ಮೋದಗಾ ಶ್ರೀ ಭಾವಕೇಶ್ವರಿ ದೇವಿಯ ಜಾತ್ರೆಯೂ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ! ನಾನಂತೂ ಈ ವರ್ಷ ಇಂಥ ಅದ್ಭುತ ಜಾತ್ರೆಯನ್ನು ಮಿಸ್ ಮಾಡಿಕೊಂಡಿದ್ದೀನಿ.. ಬಟ್ ನೀವು ಮಾತ್ರ ಮಿಸ್ ಮಾಡ್ಕೋಬೇಡಿ..!