ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಗಾಡಗೇರಾ ಗ್ರಾಮದ ಬುಡಕಟ್ಟು ಸಿದ್ದಿ ಸಮುದಾಯದ ಖ್ಯಾತ ಜಾನಪದ ಕಲಾವಿದೆ ಸೋಬಿನ್ ಮೋತೆಸ್ ಕಾಂಬ್ರೆಕರ್ 2024ನೇ ಸಾಲಿನ ಕೊಂಕಣಿ ಸಾಹಿತ್ಯ ಅಕಾಡೆಮಿಯ ಜಾನಪದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅವರ ಸಾಧನೆ ಇಡೀ ಹಳಿಯಾಳ ತಾಲೂಕು ಹಾಗೂ ಸಿದ್ದಿ ಸಮುದಾಯಕ್ಕೆ ಹೆಮ್ಮೆಪಡುವ ಸಂಗತಿಯಾಗಿದೆ.65 ವರ್ಷ ವಯಸ್ಸಿನ ಸೋಬಿನ್ ಮೋತೆಸ್ ಕಾಂಬ್ರೆಕರ್ ಹಲವಾರು ದಶಕಗಳಿಂದ ಸಿದ್ದಿ ನೃತ್ಯ, ಡಯಾಮಿ ವಾದಕರಾಗಿ ತಮ್ಮ ಸಮುದಾಯದ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತಿದ್ದು, ಮರಾಠಿ ಮಿಶ್ರಿತ ಕೊಂಕಣಿ ಭಾಷೆಯಲ್ಲಿ ಸಂಪ್ರದಾಯಿಕ ಜಾನಪದ ಹಾಡುಗಳನ್ನು ಗಾನಮಾಧ್ಯಮವಾಗಿ ಬಳಸಿಕೊಂಡಿದ್ದಾರೆ. ಅವರು ತಮ್ಮ ನೆಲದ ಕಲೆಯನ್ನು ದೇಶ-ವಿದೇಶಗಳಿಗೂ ಪರಿಚಯಿಸಿ, ಸಿದ್ದಿ ಸಂಸ್ಕೃತಿಯ ವೈಭವವನ್ನು ಪ್ರಚಾರಕ್ಕೆ ತಂದುಕೊಟ್ಟಿದ್ದಾರೆ.
ಸೋಬಿನ್ ಅವರ ಸೇವೆ ಯುವ ಪೀಳಿಗೆಗೆ ಪ್ರೇರಣೆಇಂದಿನ ಆಧುನಿಕ ಯುಗದಲ್ಲಿ ಗ್ರಾಮೀಣ ಜಾನಪದ ಕಲೆಗಳು ಇತಿಹಾಸದ ಪುಟ ಸೇರುತ್ತಿರುವ ಸಂದರ್ಭದಲ್ಲಿ, ಸೋಬಿನ್ ಅವರು ತಮ್ಮ ಕಲಾಸೇವೆಗೆ ಬದುಕನ್ನು ಸಮರ್ಪಿಸಿ, ಜನಮಾನಸದಲ್ಲಿ ಉಳಿಯುವಂತೆ ಮಾಡಿದ್ದಾರೆ.
ಅವರ ಈ ಸೇವೆ-ಸಾಧನೆ ಇಂದಿನ ಯುವ ತಲೆಮಾರಿಗೆ ಪ್ರೇರಣೆಯಾಗಲಿ ಎಂಬುದು ಕಲಾ ಪ್ರೇಮಿಗಳ ಆಶಯ.ಪ್ರಶಸ್ತಿ ವಿಜೇತರಾದ ಸೋಬಿನ್ ಮೋತೆಸ್ ಕಾಂಬ್ರೆಕರ್ ಅವರಿಗೆ ಹಲವಾರು ಕಲಾಭಿಮಾನಿಗಳು, ಸಿದ್ಧಿ ಸಮುದಾಯದ ಮುಖಂಡರು ಹಾಗೂ ಹಳಿಯಾಳದ ಜನತೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ