
ಬೆಳಗಾವಿ, ಡಿಸೆಂಬರ್ 13: ‘ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಮತ್ತು ನವಜಾತ ಶಿಶುಗಳ ಸಾವಿನ ಬಗ್ಗೆ ವರದಿ ಪಡೆದಿರುವೆ. ಪ್ರತಿ ಸಾವಿನ ಬಗ್ಗೆ ಇನ್ನಷ್ಟು ಸ್ಪಷ್ಟ ಮಾಹಿತಿ ಪಡೆಯಲಾಗುವುದು. ಇಂತಹ ಅವಘಡ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ತಾಕೀತು ಮಾಡಿದ್ದೇನೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.
ಬಿಮ್ಸ್ ಆವರಣದಲ್ಲಿನ ಹೆರಿಗೆ ಮತ್ತು ಚಿಕ್ಕಮಕ್ಕಳ ಚಿಕಿತ್ಸಾ ವಿಭಾಗಗಳನ್ನು ಶುಕ್ರವಾರ ಪರಿಶೀಲಿಸಿ ಮಾತನಾಡಿದ ಅವರು, ‘ಇನ್ನೆರಡು ತಿಂಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ. ಆಗ ಎಲ್ಲ ಸಮಸ್ಯೆ ಬಗೆಹರಿಯುತ್ತವೆ. ಆಸ್ಪತ್ರೆಗೆ ಬೇಕಾದ ಹೆಚ್ಚಿನ ಸಿಬ್ಬಂದಿ ನೀಡಲಾಗುವುದು. ಗರ್ಭಿಣಿ, ಬಾಣಂತಿ ಮತ್ತು ನವಜಾತ ಶಿಶುಗಳ ಸಾವಿನ ವಿಷಯದಲ್ಲಿ ಬಹುತೇಕ ಪ್ರಕರಣಗಳು ‘ತೀವ್ರ ನಿಗಾ ಸ್ಥಿತಿ’ ಎಂದೇ ದಾಖಲಾಗಿವೆ’ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ‘ಬಾಣಂತಿ– ಶಿಶುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕುಂದು ಕೊರತೆ ಕಂಡುಬಂದಲ್ಲಿ ಸರ್ಕಾರದ ಗಮನಕ್ಕೆ ತರಬೇಕೆಂದು ಸೂಚಿಸಿರುವೆ’ ಎಂದರು.‘2021ರಿಂದ ಈವರೆಗೆ ಸಂಭವಿಸಿದ ಸಾವುಗಳನ್ನು ಲೆಕ್ಕ ಹಾಕಿದರೆ ಈ ವರ್ಷ ಕಡಿಮೆ ಆಗಿದೆ. ಹಾಗೆಂದು ನಾವು ನಿರಾಳ ಆಗಲು ಆಗದು. ಒಂದು ಸಾವೂ ಸಂಭವಿಸದಂತೆ ಎಚ್ಚರಿಕೆ ವಹಿಸಲು ಸೂಚಿಸಿದ್ದೇನೆ’ ಎಂದರು.