
•ಸಿದ್ಧರಾಮ ತಳವಾರ, ಲೇಖಕ
ಭಜನೆ, ಹಾಡು, ತಬಲ, ಹಾರ್ಮೊನಿಯಮ್ಮಿನ ಅತಿಯಾದ ವ್ಯಾಮೋಹದಿಂದಾಗಿ ಚಿಕ್ಕಂದಿನಲ್ಲೇ ನನ್ನನ್ನು ಅತಿಯಾಗಿ ಕಾಡಿದ್ದು ಇದೇ ಕನಕದಾಸರ ಈ ಸಾಲುಗಳು..!
ದಂಡನಾಯಕ ಕನಕ ಹೌದು! ಕನಕ ಕೇವಲ ಕೀರ್ತನಕಾರನಲ್ಲ ಆತನೊಬ್ಬ ಮೇಧಾವಿ ದಂಡನಾಯಕ ಅನ್ನೋದು ಗೊತ್ತಾಗಿ ಅಚ್ಚರಿ ಉಂಟಾಯಿತು. ಬೀರಪ್ಪ ಮತ್ತು ಬಚ್ಚಮ್ಮ ದಂಪತಿಗಳು ತಿರುಪತಿ ತಿಮ್ಮಪ್ಪನ ಭಕ್ತರಾಗಿದ್ದರು ಹೀಗಾಗಿ ಅವರಿಗೆ ಜನಿಸಿದ ಈ ಮಗುವೇ ಕನಕದಾಸರು ಇವರಿಗೆ ಸಹಜವಾಗಿ ತಿಮ್ಮಪ್ಪ ಅಂತ ಕರೆದ್ರು. ವಿಜಯನಗರದ ಅರಸರಲ್ಲಿ ದಂಡನಾಯಕನಾಗಿದ್ದ ಬೀರಪ್ಪ ಕುರುಬ ಸಮುದಾಯದವನಾಗಿದ್ದ. ತಿಮ್ಮಪ್ಪನ ದುರಾದೃಷ್ಟ ಅಕಾಲಿಕವಾಗಿ ತೀರಿಕೊಂಡ. ಆ ನಂತರದಲ್ಲಿ ತಾಯಿ ಬಚ್ಚಮ್ಮ ಆತನನ್ನು ತುಂಬ ಧೈರ್ಯ ತುಂಬಿ ಪರಾಕ್ರಮಿಯನ್ನಾಗಿ ರೂಪಿಸಿದಳು ಹೀಗಾಗಿ ವಿಜಯನಗರದ ಅರಸರು ಆತನನ್ನು ದಂಡನಾಯಕನನ್ನಾಗಿ ಸೇರಿಸಿಕೊಂಡರು. ನ್ಯಾಯ, ಧರ್ಮದ ಪರವಾಗಿದ್ದ ತಿಮ್ಮಪ್ಪ ಆ ನಂತರ ತಿಮ್ಮಪ್ಪ ನಾಯಕನಾಗಿ ಗುರತಿಸಿಕೊಂಡ.
7ಹಂಡೆ ಬಂಗಾರ: ತಿಮ್ಮಪ್ಪ ತನ್ನ ಜಮೀನಿನಲ್ಲಿ ಕೃಷಿ ಮಾಡುವಾಗ ಒಂದು ದಿನ ಬಂಗಾರದ ಆಭರಣ ತುಂಬಿದ 7 ಹಂಡೆಗಳು ಸಿಗುತ್ತವೆ ಅದನ್ನು ರಾಜನ ಸಮ್ಮುಖದಲ್ಲೇ ಮಠ ಮಂದಿರಗಳು,ಶಾಲೆಗಳು, ಇತರೆ ಜನೋಪಯೋಗಿ ಕೆಲಸಗಳಿಗಾಗಿ 78 ಹಳ್ಳಿಗಳ ಬಡವರಿಗೆ ಅವಶ್ಯಕತೆಗನುಸಾರ ಹಂಚುವ ಮೂಲಕ ಆ ಜನರ ಪಾಲಿನ ಬಂಗಾರದ ಮನುಷ್ಯನಾದ. ತನಗೆ ದೊರೆತ ಕನಕವನ್ನೆಲ್ಲ ಬಡವರಿಗೆ ಹಂಚಿದ್ದಕ್ಕಾಗಿ #ಕನಕನಾಯಕ# ಎಂದೇ ಕರೆಸಿಕೊಂಡ. ಆ ಮೂಲಕ ಕನಕನಾಯಕ ಭಗವಂತನ ಪ್ರೀತಿಗೆ ಪಾತ್ರನಾದ.ಒಂದು ದಿನ ಕನಸಲ್ಲಿ ಭಗವಂತ ಕಾಣಿಸಿಕೊಂಡು ಲೋ ಕನಕ ನೀನು ನನ್ನ ದಾಸನಾಗೋ ಅಂತ ಅಂದಿದ್ದು ಆತನನ್ನು ತುಂಬ ಕಾಡುತ್ತೇ. ನಿತ್ಯ ಭಗವಂತ ಕನಸ್ಸಲ್ಲಿ ಕೇಳೋ ಈ ಪ್ರಶ್ನೆಗೆ ಅವಾಕ್ಕಾದ ಕನಕನಾಯಕ ಇದನ್ನು ಒಪ್ಪದೇ ಊಹೂಂ ಅಂತ ಕಡ್ಡಿ ತುಂಡು ಮಾಡಿದಂತೆ ಚೀರಿ ಹೇಳಿಯೇ ಬಿಟ್ಟ. ಪಾಪ ಭಗವಂತನ ತಾಳ್ಮೆ ಮೀರಿತ್ತು ಕೋಪ ನೆತ್ತಿಗೇರಿತ್ತು ಹೇಗಾದರೂ ಸರಿ ಇವನನ್ನು ನನ್ನ ದಾಸನನ್ನಾಗಿ ಮಾಡಿಕೊಳ್ಳಲೇ ಬೇಕು ಅನ್ನೋ ಮೊಂಡು ಹಠ ಭಗವಂತನದು. ಕೆಲ ದಿನಗಳಲ್ಲೇ ಆತನ ತಾಯಿ ತೀರಿ ಹೋಗತ್ತಾಳೆ. ಮತ್ತೇ ಭಗವಂತ ಕನಸು ದಾಸನಾಗೋ ಕೋರಿಕೆ. ಕನಕ ಆಗಲೂ ಊಹೂಂ… ಮತ್ತೇ ಅಸಮಾಧಾನ. ಕೆಲದಿನಗಳ ನಂತರ ಆತನ ಹೆಂಡತಿ ಸಾವು ಮತ್ತೇ ಭಗವಂತನ ಕೋರಿಕೆ ಕನಕನ ನಕಾರ… ಈ ಎಲ್ಲ ಘಟನೆಗಳು ಕನಕನನ್ನು ಬಾಧಿಸಿದ್ದವಾದರೂ ಕನಕ ಕಿಂಚಿತ್ತೂ ಕುಂದಿರಲಿಲ್ಲ.
ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ, ಬರಿದೇ ಮಾತೇಕಿನ್ನು ಅರಿತು ಪೇಳುವೇನಯ್ಯ…ತಾಯಿ ತಂದೆಯ ಬಿಟ್ಟು ತಪವ ಮಾಡಲೂ ಬಹುದುದಾಯಾದಿ ಬಂಧುಗಳ ಬಿಡಲೂ ಬಹುದುರಾಯ ತಾ ಮುನಿದರೆ ರಾಜ್ಯವನೇ ಬಿಡಬಹುದುಕಾಯಜ ಪಿತ ನಿನ್ನ ಅರೆಘಳಿಗೆ ಬಿಡಲಾಗದು!
ಕನಕದಾಸನಾಗಿದ್ದುಹೌದು! ಮಹಾಪರಾಕ್ರಮಿಯೂ ಆಗಿರುವ ಕನಕ ವಿಜಯನಗರದ ಮೇಲೆ ವಿಧರ್ಮಿಗಳು ಯುದ್ದ ಮಾಡಲು ದಾಳಿ ಮಾಡಿದಾಗ ಖಡ್ಗ ಹಿಡಿದೆತ್ತಲೂ ಆಗದಂತೆ ಭಗವಂತ ಆತನ ಎಲ್ಲ ಶಕ್ತಿಯನ್ನು ಕುಂದಿಸಿದ ಗಂಭೀರ ಗಾಯಗೊಂಡ ಕನಕ ತನ್ನ ರಾಜ್ಯ ರಾಜ ಮತ್ತು ಸೈನಿಕರ ಶವಗಳನ್ನು ಕಂಡು ಕಂಗಾಲಾಗಿ ಹೋಗುತ್ತಾನೆ. ಭಗವಂತ ಈ ಸಲ ಮಾಯಾ ಮಾನವ ದೇಹಿಯಾಗಿ ಆತನೆದುರು ನಗುತ್ತ ಈಗಲಾದರೂ ನನ್ನ ದಾಸನಾಗೋ ಅಂತ ಹಲ್ಕಿರಿದಾಗ ಆಕ್ರೋಶದಿಂದ ಪರಿಪರಿಯಾಗಿ ದಾಸನಾಗೋ ಅಂತ ಕಾಡುವ ನೀನು ಯಾರೋ ಅಂತ ಕಣ್ಣು ಕೆಂಪಗೆ ಮಾಡ್ಕೊಂಡಾಗ ತಿರುಪತಿ ತಿಮ್ಮಪ್ಪನೇ ಆತನೆದುರು ಕಾಣಿಸಿಕೊಂಡ ಅನ್ನೋ ವೃತ್ತಾಂತವನ್ನು ಓದಿದ ನೆನಪು. ಆ ನಂತರ ಕನಕನಾಯಕ ರಾಜ್ಯ ಸಂಪತ್ತು ಅಧಿಕಾರ ಎಲ್ಲವನೂ ತ್ಯಜಿಸಿ ಬಾಡ ಗ್ರಾಮಕ್ಕೆ ಹೋಗಿ ಕೇವಲ ಕಂಬಳಿಯೂಂದನ್ನು ಹೊದ್ದು ಭಗವಂತನ ದಾಸನಾದ ಕನಕದಾಸನಾದ ಅನ್ನುವುದು ಈತನ ವೃತ್ತಾಂತ.
ವ್ಯಾಸರಾಯನ ಶಿಷ್ಯ ಕನಕ: ಗುರುಗಳನ್ನು ಹುಡುಕುತ್ತ ಹೊರಟ ವ್ಯಾಸರಾಯರು ಬ್ರಾಹ್ಮಣ ಯತಿಗಳು ಇವನೋ ಕುರುಬ ಇವನನ್ನು ನೋಡಿದ ವ್ಯಾಸರು ‘ಯಾರೋ ನೀನು? ಅಂತ ಕೇಳಿದಾಗ ‘ನಾನು ಕನಕದಾಸ’ ಅಂತಾನೇ ಕುರುಬರ ಕನಕ ದಂಡನಾಯಕ ಅಂತ ಗರುತಿಸಿದ ವ್ಯಾಸರು ಬಂದ ಕಾರಣ ಕೇಳಿ ನಗುತ್ತಲೇ ‘ನಿನಗೆ ಮಂತ್ರ ಹೇಳಿಕೊಡಬೇಕೇನೋ ಕೋಣ’ ಅಂದ್ರಂತೆ. ಬಹುಶಃ ಇದೂ ಮಂತ್ರವೇ ಇರಬೇಕು ಅಂದ್ಕೊಂಡ ಕನಕ ಅದನ್ನೇ ಧ್ಯಾನಿಸಿದಾಗ ನಿಜಕ್ಕೂ ಆತನಿಗೆ ಅಚ್ಚರಿ ಕಾದಿತ್ತು ಆತನೆದುರು ಬಲಿಷ್ಟ ಕೋಣವೊಂದು ಎದುರು ನಿಂತಿತ್ತು ವ್ಯಾಸರಿಗೆ ಈ ಸಂಗತಿ ಗೊತ್ತಾದ ಮೇಲೆ ಈತ ಸಾಮಾನ್ಯನಲ್ಲ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡಾತ ಅನ್ನೋದು ಅರಿತು ಆತನನ್ನು ತನ್ನ ಶಿಷ್ಯನನ್ನಾಗಿ ಸ್ವೀಕರಿಸಿದರು. ಅದೇ ಕೋಣದಿಂದ ಬೃಹತ್ ಬಂಡೆಗಲ್ಲು ಪುಡಿ ಮಾಡಿಸಿ ಸೇತುವೆ ನಿರ್ಮಿಸಿದರು ಅನ್ನೋ ಐತಿಹ್ಯವಿದೆ.
ವ್ಯಾಸಕೂಟದಲ್ಲಿ ಬಾಗಿಯಾದ ಏಕೈಕ ಬ್ರಾಹ್ಮಣೇತರ ಶಿಷ್ಯ ಕನಕದಾಸ. ಬ್ರಾಹ್ಮಣರಿಗಾಗಿಯೇ ವೇದ ಆಗಮ ಶಾಸ್ತ್ರ ಪುರಾಣ ಪುಣ್ಯಕಥೆಗಳನ್ನು ಹೇಳಿಕೊಡಲಾಗುವ ವ್ಯಾಸಕೂಟಕ್ಕೆ ಅನುಮತಿ ನೀಡದ ಒಬ್ಬ ಸಿಬ್ಬಂದಿಗೆ ತನ್ನ ವಾಕ್ ಮತ್ತು ಪಾಂಡಿತ್ಯದಿಂದ ಬೆರಗುಗೊಳಿಸಿ ವ್ಯಾಸಕೂಟದ ಮೇರು ಪ್ರತಿಭೆ ಅನ್ನಿಸಿಕೊಂಡಾತ ಕನಕ.ಉಡುಪಿ ಶ್ರೀ ಕೃಷ್ಣನೂ ಕೂಡ ಈತನಿಗೆ ದರುಶನ ನೀಡಿದ ಪರಿಯನ್ನು ಸಿನಿಮಾಗಳಲ್ಲಿ ನೋಡಿ ತಿಳಿದಿದ್ದೇವೆ. ಇನ್ನು ತಿರುಪತಿಯಲ್ಲಿ ಸಾಕ್ಷಾತ ಭಗವಂತನೇ ಈತನಿಗೆ ಕೈ ತುತ್ತು ತಿನ್ನಿಸಿ ತನ್ನ ಪೀತಾಂಬರವನ್ನು ಹೊದಿಸಿ ಮಲಗಿಸಿದ ಕಥೆಯೂ ಉಂಟು.ಭಗವಂತನೊಂದಿಗೆ ಆ ಪರಿಯ ಭಕ್ತಿ ಇರಿಸಿಕೊಂಡ ಕನಕ ಮೇಲೆ ನಾನು ಉಲ್ಲೇಖಿಸಿದ ಅವರ ಸಾಲುಗಳ ಆಶಯದಂತೆ ರಾಯ ತಾ ಮುನಿದರೆ ರಾಜ್ಯವನೂ ಬಿಡಬಹದು ನಿನ್ನ ತೊರೆದು ಜೀವಿಸುವುದು ಸಾಧ್ಯವೇ ಅಂತ ಪ್ರಶ್ನೆ ಮಾಡುತ್ತಾರೆ ಕನಕದಾಸರು. ಭಕ್ತಿ ಪಂಥದ ದಾಸರಲ್ಲಿ ಶ್ರೇಷ್ಠತೆಯನ್ನು ಪಡೆದ ಕನಕದಾಸರು ಸಮಾನತೆಯ ನೆಲೆಗಟ್ಟಿನಲ್ಲಿ ಸಮಾಜವನ್ನು ಕಟ್ಟುವ ಕನಸು ಕಂಡವರು. ಇವರ ಬಹುತೇಕ ಕೀರ್ತನೆಗಳ ಆಶಯವೂ ಸಮಸಮಾಜದ ಕನಸನ್ನೇ ಬಿಂಬಿಸುತ್ತವೆ. ಇಂತಹ ದಾಸಶ್ರೇಷ್ಠರು ನಮಗೆಲ್ಲ ಆದರ್ಶ ಈ ಹೊತ್ತಲ್ಲಿ ಅವರ ಸ್ಮರಣೆ ನಿಜಕ್ಕೂ ತುಂಬ ಅಗತ್ಯವಿದೆ ಅಂತ ಹೇಳ್ತಾ ನಾಡಿನ ಸಮಸ್ತ ಜನತೆಗೂ ಕನಕದಾಸರ ಜಯಂತಿಯ ಶುಭಾಶಯಗಳು.