ಬೆಂಗಳೂರು, ಫೆ.09: ನಗರದ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 10 ರಿಂದ 14 ರವರೆಗೆ ನಡೆಯಲಿರುವ ಏಷ್ಯಾದ ಅತಿದೊಡ್ಡ ಏರೋಸ್ಪೇಸ್ ಪ್ರದರ್ಶನವಾದ ಏರೋ ಇಂಡಿಯಾ 2025 ಕ್ಕೆ ವೇದಿಕೆ ಸಿದ್ಧವಾಗಿದೆ.
ದ್ವೈವಾರ್ಷಿಕವಾಗಿ ನಡೆಯುವ 15 ನೇ ಆವೃತ್ತಿಯ ಏರೋ ಇಂಡಿಯಾ ಶೋನಲ್ಲಿ ಇತ್ತೀಚಿನ ಅತ್ಯಾಧುನಿಕ ವೈಮಾನಿಕ ತಂತ್ರಜ್ಞಾನವು ಅನಾವರಣಗೊಳ್ಳಲಿದೆ.
ಇದರ ಪೂರ್ವಭಾವಿಯಾಗಿ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಭಾನುವಾರ ಯಲಹಂಕದ ವಾಯುನೆಲೆಯಲ್ಲಿ ಲಘು ಯುದ್ಧ ವಿಮಾನ (ಎಲ್‌ಸಿಎ) ತೇಜಸ್‌ನಲ್ಲಿ ಹಾರಾಟ ನಡೆಸಿದರು.
ಏರ್ ಚೀಫ್ ಮಾರ್ಷಲ್ ಅವರು ಸೇನಾ ಮುಖ್ಯಸ್ಥರೊಂದಿಗೆ ಲೋಹದ ಹಕ್ಕಿಯನ್ನು ಹಾರಿಸುತ್ತಿದ್ದಂತೆ ಎಲ್ಲರ ಕಣ್ಣುಗಳು ಆಕಾಶದತ್ತ ನೆಟ್ಟಿದವು. ಯಶಸ್ವಿ ಹಾರಾಟದ ನಂತರ ಜನರಲ್ ದ್ವಿವೇದಿ, ಇದು ತಮ್ಮ ಜೀವನದ ಅತ್ಯುತ್ತಮ ಕ್ಷಣ ಎಂದು ಬಣ್ಣಿಸಿದರು.