ಅಪನಿ ಹೋಂಟೊ ಪರ್ ಸಜಾನಾ ಚಾಹತಾ ಹೂಂಆ ತುಝೆ ಮೈ ಗುನ್‌ಗುನಾನಾ ಚಾಹತಾ ಹೂಂ(ತುಟಿಯಂಚಿನ ಅಲಂಕಾರವಾಗ ಬೇಕಂತೀನಿಲಿನಾ ನಿನ್ನ ಆಗಾಗ ಗುನುಗಬೇಕಂತೀನಿ)
ಕೋಯಿ ಆಂಸೂ ತೇರೆ ದಾಮನ್ ಪರ್ ಗಿರಾಕರ್‌ಬೂಂದ ಕೊ ಮೋತಿ ಬನಾನಾ ಚಾಹತಾ ಹೂಂ (ಕಣ್ಹನಿಯೊಂದನು ನಿನ್ನ ಉಡಿಯೊಳಗುರುಳಿಸಿಆ ಕಂಬನಿಯ ಶ್ವೇತಶುಭ್ರ ಮುತ್ತಾಗಿಸಬೇಕಂತೀನಿ)
ಥಕ್ ಗಯಾ ಮೈ ಕರತೆ ಕರತೆ ಯಾದ ತುಝಕೊಅಬ್ ತುಝೆ ಮೈ ಯಾದ್ ಆನಾ ಚಾಹತಾ ಹೂಂ(ಸಾಕುಸಾಕಾಯಿತು ನಿನ್ನ ನೆನೆನೆನೆದುನಾ ನಿನಗೀಗ ನೆನಪಾಗಿ ಕಾಡಬೇಕಂತೀನಿ)
ಛಾ ರಹಾ ಹೈ ಸಾರಿ ಬಸ್ತಿ ಮೆ ಅಂಧೇರಾರೋಶನಿ ಕೊ ಘರ್ ಜಲಾನಾ ಚಾಹತಾ ಹೂಂ(ಓಣಿಯೊಳಗೆಲ್ಲ ಕತ್ತಲೆಯದ್ದೇ ಕಾರುಬಾರುಬೆಳಕಿನ ಕಿಡಿಗಾಗಿ ಮನಿಸುಡಬೇಕಂತೀನಿ)
ಆಖರಿ ಹಿಚಕಿ ತೇರೆ ದಾಮನ್ ಪೆ ಆಯೆಮೌತ್ ಭಿ ಮೈ ಶಾಯರಾನಾ ಚಾಹತಾ ಹೂಂ(ಕೊನಿ ಬಿಕ್ಕಳಿಕಿ ನಿನ್ನ ಮಡಿಲೊಳಗಿದ್ದಾಗ ಬರಲಿಸಾವುನೂ ನನಗೊಂದು ಕಾವ್ಯಯಾಗಲಿಯಂತೀನಿ)
ಅದ್ಹಂಗೆ… ಕೊನಿಯುಸಿರೇನಾದರೂ ಒಳಹೊಕ್ಕು, ಕೊನಿಸಲ ಹೊರಬರಬೇಕು ಅನ್ನೂಮುಂದಿನ ಬಿಕ್ಕಳಿಕಿ ನಿನ್ನ ಮಡಿಲೊಳಗಬರಲಿ… ಅಂಥದ್ದೊಂದು ಶಾಯರಾನಾ ಅಂದ್ರ ಕಾವ್ಯಾತ್ಮಕ ಮರಣವನ್ನೇ ಬಯಸ್ತೀನಿ…ಅಂತ ಹಾಡಿದ ಕವಿ ಖತೀಲ್ ಶಿಫಾಯಿ. ಈ ಸಾವನ್ನು ಬಯಸುವುದರೊಳಗ, ಆಹ್ವಾನಿಸುವುದರೊಳಗ, ಅದಕ್ಕಾಗಿ ಸಮಾಧಿ ಕಟ್ಕೊಂಡು ತಯಾರಿ ಮಾಡ್ಕೊಳ್ಳೂದ್ರೊಳಗ ಬಹುಶಃ ಇಸ್ಲಾಂ ಅನುಯಾಯಿಗಳಷ್ಟು ಪರಿಣಾಮಕಾರಿಯಾದ ತಯಾರಿ ಯಾರೂ ಮಾಡಿಕೊಳ್ಳಲೇ ಇಲ್ಲವೇನೋ.
ಮರಣವೇ ಮಹಾನವಮಿ ಅಂದ ಶರಣರೂ, ಮರಣಕ್ಕಿಂತಲೂ ಜೀವನದತ್ತ ಹೆಚ್ಚು ಮಹತ್ವ ನೀಡಿದವರು. ಆದ್ರ ಈ ಕವಿತೆ ಮಾತ್ರ ತನ್ನ ಸಾವಿನ ಬಯಕೆಯನ್ನು ಅದೆಷ್ಟು ಚಂದ ಹೇಳ್ತದ.
ನಿನ್ನನ್ನು ಬಯಸೂದು ಹೆಂಗಂದ್ರ, ಅಗ್ದಿ ನನ್ನ ತುಟಿ ಮ್ಯಾಲಿನ ಅಲಂಕಾರದ್ಹಂಗ, ಪ್ರತಿಕ್ಷಣದ ಗುನುಗಿನ್ಹಂಗ ಅಂತ ಹೇಳ್ತದ. ‘ಅಪನಿ ಹೋಂಟೊ ಪರ್ ಸಜಾನಾ ಚಾಹತಾ ಹೂಂ/ ಆ ತುಝೆ ಮೈ ಗುನ್‌ಗುನಾನಾ ಚಾಹತಾ ಹೂಂ..’ ಇಷ್ಟೆಲ್ಲ ಮುಚ್ಚಟೆಯಿಂದ ಬಯಸೂದು, ಒಂದಷ್ಟು ದಿನ ತುಟಿಯ ಮ್ಯಾಲಿನ ಮುಗುಳು ಮಾಡಿಕೊಂಡು ಸಂಭ್ರಮಿಸುವುದೇ ಪ್ರೀತಿ. ಅದೊಂಥರ ಬಿರುಬಿಸಿಲಿನ ನಡುಮಧ್ಯಾಹ್ನದ ಸುಳಿಗಾಳಿ ಬೀಸಿದ್ಹಂಗ ಒಂದೀಟೆ ಈಟು ನಗು ಮೂಡಿ, ಅಲ್ಲೇ ಸ್ಥಾಯಿ ಆಗೂದು. ಮತ್ತ ಕಣ್ಣಗೋಲಿ ಆಕಡೆ ಈ ಕಡೆ ನೋಡಿ, ತನ್ನನ್ನ ತಾನು ಗದರಿಕೊಂಡು ಮುಗುಳನ್ನು ಹಂಗೇ ಎದಿಯೊಳಗ ಇಳಸ್ಕೊಳ್ಳೂದು…
ಪ್ರೀತಿಯಂದ್ರ ಹಂಗೆ, ಹೊರಗ ಬರಬೇಕಂತದ.. ನಾವು ಒಳಗ ಅದುಮಿಡ್ತೇವಿ. ಅದು ಅದುಮಿಟ್ಟಷ್ಟೂ ಸಿಡೀತದ, ಚಿಮ್ತದ. ಅದ್ಹೆಂಗಂದ್ರ ತೀರ ಸಂಗಾತಿಯ ಮಡಿಲೊಳಗ ದುಃಖದ ಮಡುವೊಂದು ಕರಗಲಿ ಅನ್ನೂಹಂಗ. ಜಮಾನಾದಿಂದ ಮಡುಗಟ್ಟಿದ ದುಃಖದ ಸಾಗರವೊಂದು ಆವಿಯಾಗಿ, ನಾಭಿಯಾಳದಿಂದ ಕಂಗಳಿಗೇರಿ ಅಲ್ಲಿ ಕಣ್ಣೀರಾಗಿ, ಸಂಗಾತಿಯ ಉಡಿಯೊಳಗ ಬಿದ್ದಾಗ ಮುತ್ತಾಗಲಿ ಅದು ಅಂತ. ಯಾವ ಮುತ್ತು? ಎಂಥ ಮುತ್ತದು? ಕಂಬನಿಯೊಂದು ಮುತ್ತಾಗೂದಂದ್ರ ಚಿತ್ತೀಮಳಿ ತತ್ತಿ ಹಾಕುತ್ತಿತ್ತು ಸ್ವಾತಿ ಮುತ್ತಿನೊಳಗ ಹಂಗ ಬೇಂದ್ರೆ ಅಜ್ಜಾರು ಹಾಡಿದ್ಹಂಗ ಖತೀಲ್ ಶಿಫಾಯಿ ಹೇಳ್ತಾರ, ‘ಕೋಯಿ ಆಂಸೂ ತೇರೆ ದಾಮನ್‌ಪರ್ ಗಿರಾಕರ್ ಮೈ ವೋ ಬೂಂದ್ ಮೋತಿ ಬನಾನಾ ಚಾಹತಾ ಹೂಂ’
ಕಣ್ಹನಿಯೊಂದನು ನಿನ್ನ ಮಡಿಲಿಗಿಳಿಸಿ, ಆ ಹನಿಯ ಮುತ್ತಾಗಿಸಬಯಸ್ತೀನಿ.. ಇಲ್ಲೇನದ.. ಈ ಸಾಲಿನೊಳಗ, ನಿನ್ನ ಮುಂದ ಕರಗಬೇಕಾಗೇದ. ಕರಗಿ, ಕಳದುಹೋಗಬೇಕಾಗೇದ. ಹಂಗ ಕಳದು ಹೋದಮ್ಯಾಲೆ ಶ್ವೇತಶುಭ್ರ ಮುತ್ತಾಗಿ ಆ ಹನಿ ಹೊಳೀಬೇಕಾಗೇದ. ಆ ಕ್ಷಣದ ನಿರಾಳ, ಮುತ್ತಾಗಲಿ.
ಅಷ್ಟೇ ಅಲ್ಲ, ‘ಥಕ್ ಗಯಾ ಮೈ ತುಝೆ ಯಾದ್ ಕರತೆ ಕರತೆ, ಅಬ್ ತುಮ್ಹೆ ಮೈ ಯಾದ್ ಆನಾ ಚಾಹತಾ ಹೂಂ’ ನಾ ಅಷ್ಟ ನಿನ್ನನ್ನ ನೆನಿಸಿ, ನೆನಿಸಿ, ಹಂಗ ನೆನಿಯೂದ್ರೊಳಗ ನೆನದು ಹೋಗಿ ಸಾಕಾಗೇದ ನನಗ.. ಇನ್ನ ಒಂದಿವ್ಸರೆ, ಒಂದರೆ ಗಳಿಗೆಯರೆ ನಿನಗ ನೆನಪಾಗಬೇಕಂತೇನಿ. ನೆನಪಾಗಬೇಕಂತೇನಿ.. ಅದ್ಹೆಂಗ ಕಣ್ಮರೆಯಾಗಿರಬೇಕು, ನೆನಪಿನಿಂದ… ಸ್ಮರಣದೊಳಗಿಲ್ಲಂದ್ರ ಅದು ಮರಣವೇ ಅನ್ನೂದು ಅರ್ಥ ಆಗ್ತದ… ಆಗ್ತದೇನು.. ಆಗೇದೇನು..? ಇಂಥ ಪ್ರಶ್ನೆಯಿದ್ದಾಗ ಸಣ್ಣದೊಂದು ಆಸಿ ಹುಟ್ತದ.. ಸಾಕಿನ್ನ… ನಾನು ನಿನ್ನ ನೆನಿಯೂದು.. ನಿನಗೀಗ ನೆನಪಾಗಬೇಕಂತೇನಿ ನಾನು..
ಒಬ್ಬ ಒಂದು ಪ್ರೀತಿಗಾಗಿ ತಹತಹಿಸುವುದೆಷ್ಟು? ತನ್ನನ್ನೇ ತಾನು ಅಳಿಯುವಂತೆ ನೋಡುವುದೆಷ್ಟು? ‘ಛಾ ರಹಿ ಹೈ ಸಾರಿ ಬಸ್ತಿ ಮೆ ಅಂಧೇರಾ, ರೋಷನಿ ಕೊ ಘರ್ ಜಲಾನಾ ಚಾಹತಾ ಹೂಂ’ ಇಡೀ ಓಣಿಯೊಳಗ ಕಗ್ಗತ್ತಲೆ ಆವರಿಸಿಕೊಂಡದ. ಈ ಕತ್ತಲೆಗೊಂದು ಬೆಳಕಿನ ಕುಡಿಬೇಕಾಗೇದ, ಮನೀಗೆ ಕಿಚ್ಚು ಹಚ್ಚಬೇಕಂತ ಮಾಡೇನಿ.. ಅದೆಂಥ ಉನ್ಮಾದ, ಜಗದ ಬೆಳಕಿಗಾಗಿ, ಒಲಿಯ ಬೆಂಕಿ, ಮನಿ ಸುಡಲಿ, ಮನ ದಹಿಸಲಿ, ಆ ಕಾವುನೂ ನಿನ್ನ ಬಿಸುಪು ನೀಡಲಾರದು ಅನಿಸ್ತದ…
ಹಿಂಗ ಕವಿ ಹೇಳ್ಕೊಂತ ತನ್ನ ಕೊನಿ ಸಾಲಿಗೆ ಬರ್ತಾನ. ಕೊನೆಯುಸಿರೊಂದು ಹೊರ ಹೋಗುಮುಂದ ನಿನ್ನ ಮಡಿಲೊಳಗಿರಬೇಕಂತೇನಿ ನಾನು, ಸಾವುನೂ ಶಾಯರಾನಾ ಬೇಕಂತೀನಿ ನಾನು’ ಅಂತ ಕೇಳ್ತಾರ…
ಹೌದ.. ಒಂದು ತುಟಿ ಮ್ಯಾಲಿನ ಗುನುಗು, ಎದಿಯೊಳಗಿನ ಆವಿ, ಕಣ್ಹನಿಯಾಗಿ, ಮನಿಸುಟ್ಟು ಬೆಳಕಾಗಿ ಕೊನಿಯುಸುರಿಗೊಂದು ಅರಕೆ ಇಟ್ಕೊಂತದ… ಬದುಕಿನಾಗ ಸಾವಿಗಿಂತ ಹೆಚ್ಚು ಮೋಹ ಇಟ್ಕೊಳ್ಳೂದು ಸಾಧ್ಯವಾದ್ರ.. ಆದ್ರ… ನಾನೂ ಅಂಥದ್ದೇ ಗುನುಗುವಂಥ ಪ್ರೀತಿಯಾಗಬೇಕಂತೇನಿ