ಬೆಳಗಾವಿ, ಡಿಸೆಂಬರ್ 20: ಖಾನಾಪುರ ಪೊಲೀಸ್ ಠಾಣೆಯಿಂದ ಸಿ.ಟಿ.ರವಿ ಅವರನ್ನು ಪೊಲೀಸರು ತಡರಾತ್ರಿ ಬಿಗಿ ಭದ್ರತೆಯಲ್ಲಿ ಬೆಂಗಳೂರಿಗೆ ಕರೆದೊಯ್ಯಲು ಹೊರಟಿದ್ದರು.
ಖಾನಾಪುರ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಿಸಿಕೊಳ್ಳಲು ವಿಳಂಬ ಮಾಡಿದ ಪೊಲೀಸರು, 11.30ರ ಬಳಿಕ ದೂರು ದಾಖಲಿಸಿಕೊಂಡರಲ್ಲದೆ, ಬಿಜೆಪಿಯ ಎಲ್ಲ ನಾಯಕರನ್ನೂ ಠಾಣೆಯಿಂದ ಹೊರಹಾಕಿ, 12.15ಕ್ಕೆ ಸಿ.ಟಿ.ರವಿ ಅವರನ್ನು ಬಲವಂತದಿಂದ ಹೊತ್ತುಕೊಂಡು ಹೋಗಿ ವಾಹನದಲ್ಲಿ ಸೇರಿಸಿಕೊಂಡು ಹೊರಟರು.
ಈ ವೇಳೆ ಸಿ.ಟಿ.ರವಿ ಅವರ ತಲೆಗೆ ಗಾಯವಾಗಿದ್ದು, ರಕ್ತ ಸೋರುತ್ತಿತ್ತು. ಆ ರವಿ ಅವರು, ‘‘ಕಾಪಾಡಿ, ಕಾಪಾಡಿ, ನನ್ನ ಕೊಲ್ತಾರೆ’’, ಎಂದು ಗೋಗರೆದರು. ಭಾರೀ ಸಂಖ್ಯೆಯಲ್ಲಿ ಠಾಣೆ ಮುಂದೆ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು, ರವಿ ಅವರನ್ನು ಸಾಗಿಸುತ್ತಿದ್ದ ವಾಹನವನ್ನು ತಡೆಯಲು ಮುಂದಾದರು.
ಈ ವೇಳೆ ತಳ್ಳಾಟ-ನುಗ್ಗಾಟ ನಡೆಯಿತು. ಆದರೆ, ಯಾವುದಕ್ಕೂ ಆಸ್ಪದ ಕೊಡದ ಪೊಲೀಸರು ತಲೆಗೆ ರಕ್ತ ಸೋರುತ್ತಿದ್ದ ರವಿ ಅವರನ್ನು ಹಾಗೆಯೇ ಕರೆದುಕೊಂಡು ಹೋದರು. ಬಳಿಕ ಠಾಣೆಯ ಮುಂದೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಜಮಾಯಿಸಿ ಧರಣಿ ಮುಂದುವರಿಸಿದರು.
ಮಾರ್ಗಮಧ್ಯೆ ವಾಹನದಿಂದ ಇಳಿದ ಸಿಟಿ ರವಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಆರಂಭಿಸಿದರು. 35 ವರ್ಷದ ಸಾರ್ವಜನಿಕ ಜೀವನದಲ್ಲಿ ಈತರದ ಪರಿಸ್ಥಿತಿ ನೋಡಿಲ್ಲ. ಮಾನವೀಯತೆ ಇಲ್ಲದೆ ರಾತ್ರಿಯಿಡೀ ಎಲ್ಲೆಲ್ಲೋ ಸುತ್ತಿಸುತ್ತಿದ್ದಾರೆ.
ಸವದತ್ತಿ ಎಲ್ಲಿದೆ, ರಾಮದುರ್ಗ ಎಲ್ಲಿದೆ. ಧಾರವಾಡದ ರಸ್ತೆಯಿಂದ ಸುತ್ತಿಸುತ್ತಿದ್ದಾರೆ. ಮೇಲಿಂದ ಡೈರೆಕ್ಷನ್ ಬರುತ್ತಿದ್ದು ಆ ಪ್ರಕಾರ ಪೊಲೀಸರು ನಡ್ಕೊತಿದಾರೆ. ಇವರೂ ಅಸಹಾಯಕರು ಆಗಿದ್ದಾರೆ. ಅಧಿವೇಶನದಿಂದ ಕರೆದುಕೊಂಡು ಬಂದಿದ್ದಾರೆ.
ಸಭಾಪತಿ ನಮ್ಮ ಕೇರ್ ಟೇಕರ್ ಆಗಿದ್ದು ಅವರೇ ಇದೆಲ್ಲ ನೋಡಿಕೊಳ್ಳಬೇಕಿದೆ..ಇದು ಷಡ್ಯಂತ್ರದ ಭಾಗ. ಸಭಾಪತಿ ಅವರು ಏನಾಗಿದೆ ಸಭೆಯಲ್ಲಿ ಅಂತ ಅವರು ಮಾತಾಡಬೇಕು. ಸಚಿವೆ ಹಾಗೂ ಡಿಸಿಎಂ ಅವರ ನಡವಳಿಕೆ ಹೇಗಿತ್ತು ಅಂತ ಎಲ್ಲರೂ ನೋಡಿದ್ದಾರೆ.
ಸಾರ್ವಜನಿಕವಾಗಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. 3 ಬಾರಿ ನನ್ನ ಮೇಲೆ ಅಟ್ಯಾಕ್ ನಡೆದಿದೆ.ಯಾವುದೇ ಸ್ಟೇಷನ್ ನಲ್ಲಿ ದೂರು ಕೊಟ್ಟರೂ FIR ಮಾಡಿಲ್ಲ. ಕೇವಲ ಹಿಂಬರಹ ಕೊಟ್ಟಿದ್ದಾರೆ. ನನ್ನ ಹಕ್ಕಿನ ಚ್ಯುತಿಯಾಗಿದೆ. ಇದು ಬಹಳ ಕಾಲ ನಡೆಯಲ್ಲ ಎಂದು ಸಿಟಿ ರವಿ ಹೇಳಿದ್ದಾರೆ.