
ಚಿಕ್ಕಮಗಳೂರು, ನವೆಂಬರ್ 19: ಕಬ್ಬಿನಾಲೆ ಅರಣ್ಯದಲ್ಲಿ ನಡೆದ ಎನ್ಕೌಂಟರ್ನೊಂದಿಗೆ ಉಡುಪಿ ಭಾಗದಲ್ಲಿ 13 ವರ್ಷಗಳ ನಂತರ ಗುಂಡಿನ ಮೊರತೆ ಕೇಳಿದಂತಾಗಿದೆ. ಸೋಮವಾರ ರಾತ್ರಿ ಐದು ಮಂದಿ ಇದ್ದ ನಕ್ಸಲರ ತಂಡ ಗ್ರಾಮಕ್ಕೆ ದಿನಸಿ ಸಾಮಗ್ರಿ ಖರೀದಿಗೆಂದು ಬಂದಿದ್ದಾಗ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿದೆ.
ಅಷ್ಟರಲ್ಲಿ ನಕ್ಸಲರು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಎನ್ಕೌಂಟರ್ನಲ್ಲಿ ವಿಕ್ರಂ ಗೌಡ ಹತನಾದರೆ, ಉಳಿದ ನಕ್ಸಲರು ಪರಾರಿಯಾಗಿದ್ದಾರೆ.
ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ ದಟ್ಟಾರಣ್ಯದಲ್ಲಿ, ಅರಣ್ಯದಂಚಿನ ಗ್ರಾಮಗಳಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಆರಂಭವಾಗಿರುವ ಕಾರಣ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ಕಳೆದ ಕೆಲವು ದಿನಗಳಿಂದ ತೀವ್ರಗೊಂಡಿತ್ತು.
ಇದೀಗ ಉಡುಪಿ ಜಿಲ್ಲೆಯಲ್ಲಿ ಗುಂಡಿನ ಮೊರೆತ ಕೇಳಿದೆ. ಉಡುಪಿ ಜಿಲ್ಲೆಯ ಹೆಬ್ರಿ ಠಾಣೆ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದ ಎನ್ಕೌಂಟರ್ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಹತನಾಗಿದ್ದಾನೆ.