ಬೆಳಗಾವಿ, ಡಿಸೆಂಬರ್ 19: ವಕ್ಫ್ ಆಸ್ತಿ ವಿವಾದ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಣ ಭಾರೀ ಜಟಾಪಟಿಗೆ ಕಾರಣವಾಯಿತು.
ರೈತರು, ದೇವಾಲಯಗಳು, ಮಠಗಳು ಸೇರಿದಂತೆ ಇನ್ನಿತರಿಗೆ ವಕ್ಫ್ ಮಂಡಳಿಯಿಂದ ನೀಡಿರುವ ನೋಟಿಸ್ ಕುರಿತು ಬಿಜೆಪಿ ಸರ್ಕಾರ ಹಾಗೂ ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಮುಗಿಬಿದ್ದಿತು.
ಬಿಜೆಪಿ ಆರೋಪ ಕುರಿತು ಪ್ರತಿಕ್ರಿಯಿಸಿದ ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್, ಒಂದು ವೇಳೆ ರೈತರು ಹಾಗೂ ದೇವಾಲಯಗಳಿಗೆ ನೋಟಿಸ್ ನೀಡಿದ್ದರೆ ಅವುಗಳನ್ನು ಹಿಂಪಡೆಯುವುದಾಗಿ ಸದನಕ್ಕೆ ಭರವಸೆ ನೀಡಿದರು.
ಜಮೀರ್ ಅಹ್ಮದ್ ಖಾನ್ ಅವರ ಮಾತನ್ನೇ ಪುನರುಚ್ಚರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಳುಮೆ ಮಾಡುತ್ತಿರುವ ಭೂಮಿಯಿಂದ ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಸದನಕ್ಕೆ ತಿಳಿಸಿದರು.
ಕೇವಲ ನೋಟಿಸ್ ಹಿಂಪಡೆದರೆ ಸಾಲದು, ಸರ್ಕಾರಿ ದಾಖಲೆಗಳಲ್ಲಿ ವಕ್ಫ್ ಎಂದು ನಮೂದಿಸಿರುವುದನ್ನು ತೆಗೆದುಹಾಕಬೇಕು ಎಂದು ಬಿಜೆಪಿ ನಾಯಕ ಅರಗ ಜ್ಞಾನೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಪಕ್ಷ ಬಿಜೆಪಿ ನಾಯಕ ಆರ್.ಅಶೋಕ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ 110 ಕುರುಬ ಕುಟುಂಬಗಳಿಗೂ ನೋಟಿಸ್ ನೀಡಲಾಗಿದೆ.
ಇವುಗಳ ತೆರವಿಗೆ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇಂತಹ ನೋಟಿಸ್ ಗಳಿಂದ ಜನರು ಸಂಕಷ್ಟ ಎದುರಿಸುತ್ತಿರುವ ನೂರಾರು ನಿದರ್ಶನಗಳಿವೆ ಎಂದು ಹೇಳಿದರು.