
ಬೆಳಗಾವಿ, ಡಿಸೆಂಬರ್ 06: ಉತ್ತರ ಕರ್ನಾಟಕದ ಶಕ್ತಿ ಕೇಂದ್ರವಾಗಿರುವ ಕುಂದಾನಗರಿ ಬೆಳಗಾವಿ ಇದೀಗ ಚಳಿಗಾಲದ ಅಧಿವೇಶನಕ್ಕೆ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ.ಇದೇ ಡಿಸೆಂಬರ್ 09 ರಿಂದ 20 ರಿ ವರೆಗೆ ಜರುಗಲಿರುವ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಇಡೀ ರಾಜ್ಯ ಸರ್ಕಾರವೇ ಬೆಳಗಾವಿಯಲ್ಲಿ ನೆಲೆಯೂರಲಿದೆ.
ಇದರೊಂದಿಗೆ ಮಹಾತ್ಮ ಗಾಂಧೀಜಿ ಅವರ ನೇತೃತ್ವದ ಕಾಂಗ್ರೆಸ್ ಅಧಿವೇಶನಕ್ಕೆ ಶತಮಾನದ ಸಂಭ್ರಮ ಇರುವ ಕಾರಣ ಇಡೀ ಬೆಳಗಾವಿ ನಗರದ ಪ್ರತಿ ರಸ್ತೆ ಗೋಡೆಗಳೂ ಬಣ್ಣಗಳಿಂದ ಅಲಂಕೃತಗೊಂಡಿವೆ. ಶತಮಾನೋತ್ಸವ ಸಂಭ್ರಮಾಚರಣೆ ಪ್ರಯುಕ್ತ ನಗರದ ಅಲ್ಲಲ್ಲಿ ಜಿಲ್ಲಾಡಳಿತದಿಂದ ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಬಿತ್ತಿ ಚಿತ್ರಗಳು ಗೋಡೆ ಬರಹಗಳು ಸಿದ್ದಗೊಳ್ಳುತ್ತಿದ್ದು ಕುಂದಾನಗರಿ ನಿಜಕ್ಕೂ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ..
ಈಗಾಗಲೇ ಜಿಲ್ಲಾಡಳಿತ ಮುಖ್ಯಮಂತ್ರಿಯಾದಿ ಇಡೀ ಸಚಿವ ಸಂಪುಟದ ಸಚಿವರುಗಳಿಗೆ ತಂಗಲು ಅಗತ್ಯ ಸಿದ್ದತೆಯನ್ನು ಕೈಗೊಂಡಿದೆ. ಬೆಳಗಾವಿಯ ಸುವರ್ಣ ವಿಧಾನಸೌಧದ ಸುತ್ತ ಪೋಲೀಸ್ ಬಿಗಿ ಭದ್ರತೆ ಒದಗಿಸಿದ್ದು ಅಧಿವೇಶನ ಮುಕ್ತಾಯವಾಗುವವರೆಗೂ ಸುವರ್ಣಸೌಧದ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಸೂಕ್ತ ಭದ್ರತೆ ಹಿನ್ನೆಲೆಯಲ್ಲಿ ಅಧಿವೇಶನಕ್ಕೆ ಆಗಮಿಸುವ ಗಣ್ಯಮಾನ್ಯರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿದ್ದು ನಿಯೋಜಿತ ಅಧಿಕಾರಿಗಳು ಸಿಬ್ಬಂದಿಗೆ ಜಿಲ್ಲಾಡಳಿತದಿಂದ ಪಾಸ್ ವಿತರಿಸಲು ತೀರ್ಮಾನಿಸಲಾಗಿದೆ. ಪ್ರತಿಭಟನೆ ಮಾಡುವವರಿಗೆ ಸೂಕ್ತ ಸ್ಥಳಾವಕಾಶ ಹಾಗೂ ತಾತ್ಕಾಲಿಕ ಟೆಂಟ್ ಕಲ್ಪಿಸಿಕೊಡಲಾಗಿದೆ.
ಪತ್ರಕರ್ತರು ಮಾಧ್ಯಮದವರಿಗೆ, ಮಾರ್ಷಲ್ ಹಾಗೂ ಅಧಿಕಾರಿಗಳ ಊಟೋಪಚಾರಕ್ಕೆ ನೆಲ ಮಹಡಿಯಲ್ಲಿ ಊಟೋಪಚಾರ ವ್ಯವಸ್ಥೆಗೆ ತಂಡ ನೇಮಿಸಲಾಗಿದೆ. ಅದರಂತೆ ವಸತಿ ಸಮಿತಿ, ಆಹಾರ ಸಮಿತಿ ಸೇರಿದಂತೆ ಹಲವು ಸಮಿತಿಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು ಜಿಲ್ಲಾಡಾಳಿತ ಸಕಲ ಸಜ್ಜತೆಗಳೊಂದಿಗೆ ಅಧಿವೇಶನಕ್ಕೆ ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ಕೈಗೊಂಡು ನಿರ್ದೇಶನ ನೀಡಲಾಗಿದೆ.
ಎರಡು ವಾರಗಳ ಕಾಲ ಜರುಗಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ಬಾರಿ ಆಡಳಿತ ಪಕ್ಷದ ವೈಫಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಚಾಟಿ ಬೀಸುವ ಪ್ರಯತ್ನದಲ್ಲಿ ವಿಇಫಲವಾಗಿ ಪ್ರತಿಪಕ್ಷಗಳ ಆಂತರಿಕ ಬಣ ಬಡಿದಾಟಗಳಲ್ಲೇ ಅಧಿವೇಶನದ ಚರ್ಚೆಗಳು ಜರುಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಉತ್ತರ ಕರ್ನಾಟಕದ ರೈತರ ಜೀವನಾಡಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಭ್ರಷ್ಟಾಚಾರದ ಬಗ್ಗೆ ಹಾಗೂ ಕಾರ್ಖಾನೆ ಉಳಿವು ಬಗ್ಗೆ ಹಾಗೂ ಇತರೆ ರೈತ ಸಂಬಂಧಿತ ಚರ್ಚೆಗಳು ಹಾಗೂ ಬೆಳಗಾವಿಗೆ ಹೊಸದಾಗಿ ಆರಂಭವಾಗಲಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಬೆಳಗಾವಿ ಅಧಿವೇಶನ ಅಂದರೆ ಕೇವಲ ಜಾಲಿ ಟ್ರಿಪ್ ಇದ್ದಂಗೆ ಅನ್ನೋ ಈ ಭಾಗದ ಜನರ ಅಭಿಪ್ರಾಯ ಹುಸಿಗೊಳಿಸಿ ಈ ಭಾಗದ ಜನರ ಜೀವನ ಸುಧಾರಣೆಗೆ ರೈತರ ಅಭಿವೃದ್ಧಿಗೆ ಸಂಬಂಧಿತ ಚರ್ಚೆಗಳಾಗಲಿ ಎರಡು ವಾರಗಳ ಕಾಲ ಸಾರ್ಥಕ ಅಧಿವೇಶನ ಜರುಗಲಿ ಅನ್ನೋದು ಈ ಜನತೆಯ ಆಶಯವಾಗಿದೆ