ಧಾರವಾಡ, ಫೆ.09: ಕಲಘಟಗಿಯಲ್ಲಿ ಸರ್ಕಾರಿ ಅಧಿಕಾರಿಗಳು ಮಾಡಿರುವ ಕೆಲಸ ಭಾರೀ ಚರ್ಚೆ ಹಾಗೂ ಆಕ್ರೋಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ತಹಶೀಲ್ದಾರ್ ಸೇರಿ 6 ಜನ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.
ರೈತರ ಪ್ರಮುಖ ಮಾಹಿತಿಯನ್ನೇ ತಪ್ಪಾಗಿ ನಮೂದಿಸಿ ವಂಚನೆ ಮಾಡಿದ ಆರೋಪ ಇವರ ಮೇಲೆ ಕೇಳಿ ಬಂದಿದೆ ಎಂದು ಹೇಳಲಾಗಿದೆ. 2024-25ನೇ ಸಾಲಿನ ಬೆಳೆ ಹಾನಿ ವಿವರ ತಂತ್ರಾಂಶದಲ್ಲಿ ತಪ್ಪು ಮಾಹಿತಿ ದಾಖಲಿಸಲಾಗಿದೆ.
ಇದರಲ್ಲಿ ಇಲ್ಲಿನ ತಹಶೀಲ್ದಾರ್ ಅವರು ಸಹ ಭಾಗಿಯಾಗಿದ್ದರು ಎನ್ನುವ ಗಂಭೀರ ಆರೋಪ ಕೇಳಿ ಬಂದಿತ್ತು. ಪರಿಶೀಲನೆ ಮಾಡಿದ ನಂತರ ಇದೀಗ ಸಸ್ಪೆಂಡ್ ಆರ್ಡರ್ ಮಾಡಲಾಗಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನಲ್ಲಿ 2024-25ನೇ ಸಾಲಿನ ಬೆಳೆ ಹಾನಿ ವಿವರ ತಂತ್ರಾಂಶದಲ್ಲಿ ತಪ್ಪು ಮಾಹಿತಿ ದಾಖಲಿಸಲಾಗಿದೆ ಎನ್ನುವ ಆರೋಪ ಇದೆ.
ಈ ರೀತಿ ತಂತ್ರಾಂಶದಲ್ಲಿ ವಿವರವನ್ನು ಸಲ್ಲಿಸುವಾಗ ಅನರ್ಹ ರೈತರ ವಿವರಗಳನ್ನೂ ಸಹ ದಾಖಲಿಸುವ ಮೂಲಕ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟವನ್ನು ಉಂಟು ಮಾಡಲಾಗಿದೆ ಎಂದು ಹೇಳಲಾಗಿದೆ.
ಈ ಪ್ರಕರಣವನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಕ್ರಮ ತೆಗೆದುಕೊಂಡಿದೆ.