Home ಸ್ಥಳೀಯ ‘ಕರ್ನಾಟಕ’ ರಾಜ್ಯೋತ್ಸವಕ್ಕೆ ಸಿರಿನುಡಿಯ ‘ದೀಪ’!ಕುಂದಾನಗರಿ ನವವಧುವಿನಂತೆ ಶೃಂಗಾರ!ಎಲ್ಲೆಲ್ಲೂ ಕನ್ನಡದ ಜೈಕಾರ!

‘ಕರ್ನಾಟಕ’ ರಾಜ್ಯೋತ್ಸವಕ್ಕೆ ಸಿರಿನುಡಿಯ ‘ದೀಪ’!ಕುಂದಾನಗರಿ ನವವಧುವಿನಂತೆ ಶೃಂಗಾರ!ಎಲ್ಲೆಲ್ಲೂ ಕನ್ನಡದ ಜೈಕಾರ!

0
‘ಕರ್ನಾಟಕ’ ರಾಜ್ಯೋತ್ಸವಕ್ಕೆ ಸಿರಿನುಡಿಯ ‘ದೀಪ’!ಕುಂದಾನಗರಿ ನವವಧುವಿನಂತೆ ಶೃಂಗಾರ!ಎಲ್ಲೆಲ್ಲೂ ಕನ್ನಡದ ಜೈಕಾರ!

ಬೆಳಗಾವಿ, ಅಕ್ಟೋಬರ್ 31: ಈ ಬಾರಿ ಕರ್ನಾಟಕ ರಾಜ್ಯೋತ್ಸವ ಮತ್ತು ದೀಪಾವಳಿ ಎರಡೂ ಒಂದೇ ದಿನ ಬಂದಿದ್ದು, ಬೆಳಗಾವಿ ಗಡಿಯಲ್ಲಿ ಕನ್ನಡದ ದೀಪ ಹಚ್ಚಲು ಲಕ್ಷ ಲಕ್ಷ ಕನ್ನಡಿಗರು ತುದಿಗಾಲಲ್ಲಿ ನಿಂತಿದ್ದಾರೆ. ಕುಂದಾನಗರಿ ತುಂಬಾ ಕನ್ನಡ ಬಾವುಟಗಳು ರಾರಾಜಿಸುತ್ತಿವೆ. ಇಡೀ ನಗರ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.

ದಸರಾ ನೋಡಲು ಮೈಸೂರಿಗೆ ಹೋಗುತ್ತಾರೆ. ಕರ್ನಾಟಕ ರಾಜ್ಯೋತ್ಸವ ಕಣ್ತುಂಬಿಕೊಳ್ಳಲು ನಾಡಿನ ಮೂಲೆ ಮೂಲೆಯಿಂದ ಕನ್ನಡದ ಕಂದಮ್ಮಗಳು ಬೆಳಗಾವಿಗೆ ಲಗ್ಗೆ ಇಡಲಿದ್ದಾರೆ. ಇಂದು ಮಧ್ಯರಾತ್ರಿ 12 ಗಂಟೆಯಿಂದಲೇ ಸಂಭ್ರಮ ಆರಂಭವಾಗಲಿದೆ.

ಈ ಬಾರಿ ರಾಜ್ಯೋತ್ಸವ ಮತ್ತು ಬೆಳಕಿನ ಹಬ್ಬ ಒಂದೇ ದಿನ ಬಂದಿದ್ದರಿಂದ ಸಂಭ್ರಮ ಇಮ್ಮಡಿಗೊಂಡಿದೆ.ಬೆಳಗಾವಿಯ ಶಕ್ತಿ ಕೇಂದ್ರ ರಾಣಿ ಚನ್ನಮ್ಮ ವೃತ್ತವು ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.

ಚನ್ನಮ್ಮ ವೃತ್ತದ ನಾಲ್ಕು ದ್ವಾರಗಳಲ್ಲಿ ಕೆಂಪು-ಹಳದಿ ಧ್ವಜಗಳ ಸ್ವಾಗತ ಕಮಾನು ಅಳವಡಿಸಲಾಗಿದೆ. ಸುತ್ತಲೂ ಕನ್ನಡ ಸಂಘಟನೆಗಳು, ಜನಪ್ರತಿನಿಧಿಗಳ ಸ್ವಾಗತ ಕೋರುವ ಪ್ಲೇಕ್ಸ್ ಗಳು ಎಲ್ಲರ ಗಮನ ಸೆಳೆಯುತ್ತಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳು ಎಲ್ಲರ ಗಮನ ಸೆಳೆಯುತ್ತಿವೆ. ದೀಪಾಲಂಕಾರ ಮಾಡಲಾಗಿದ್ದು, ಚನ್ನಮ್ಮ ಪುತ್ಥಳಿ ಸ್ವಚ್ಛಗೊಳಿಸಿ, ಹೊಸದಾಗಿ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆ.

ಟೀಶರ್ಟ್, ಕನ್ನಡ ಬಾವುಟ ಮಾರಾಟ ಜೋರು: ಬೆಳಗಾವಿ ಗಲ್ಲಿ ಗಲ್ಲಿಯಲ್ಲಿ ಕನ್ನಡ ಬಾವುಟ, ಶಲ್ಲೆಗಳ ಮಾರಾಟ ಜೋರಾಗಿದೆ. ಕನ್ನಡಾಭಿಮಾನಿಗಳು ಬಾವುಟ ಖರೀದಿಸುವಲ್ಲಿ ನಿರತರಾಗಿದ್ದಾರೆ. ಇನ್ನು ಬ್ರಿಟಿಷರಿಗೆ ಕೊಡಲಿಲ್ಲಾ ಕಪ್ಪ, ಬೆಳಗಾವಿ ಕೇಳಿ ಮಾಡಬ್ಯಾಡ್ರಿ ತಪ್ಪ ..! ಎಂಬ ಬರಹದ ರಾಣಿ ಚನ್ನಮ್ಮ ಭಾವಚಿತ್ರದ ಟೀಶರ್ಟ್ ಗಳು ಗ್ರಾಹಕರ ಸೆಳೆಯುತ್ತಿವೆ. ಜನರು ಕುಳಿತುಕೊಂಡು ಮೆರವಣಿಗೆ ವೀಕ್ಷಿಸಲು ಗ್ಯಾಲರಿ ಅಳವಡಿಸಲಾಗಿದೆ.

12ಕ್ಕೆ ಸಂಭ್ರಮ ಶುರು: ರಾತ್ರಿ 12 ಗಂಟೆ ಆಗುತ್ತಿದ್ದಂತೆ ಚನ್ನಮ್ಮ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಲಿರುವ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸಲಿದ್ದಾರೆ . ಕನ್ನಡ ಬಾವುಟಗಳನ್ನು ಹಾರಾಡಿಸುತ್ತಾ, ಜೈಕಾರ ಕೂಗುತ್ತಾ, ಕುಣಿದು ಕುಪ್ಪಳಿಸಲಿದ್ದಾರೆ. ಬಳಿಕ ಬೆಳಿಗ್ಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ರಾಜ್ಯೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಭವ್ಯ ಮೆರವಣಿಗೆ ಶುರುವಾಗಲಿದೆ. ಈ ವೇಳೆ ನೂರಾರು ರೂಪಕಗಳು, ಮಹಾಪುರುಷ ವೇಷಧಾರಿ ಮಕ್ಕಳು ಮೆರವಣಿಗೆಗೆ ಮೆರಗು ತಂದು ಕೊಡಲಿದ್ದಾರೆ. ಕಿವಿಗಡಚಿಕ್ಕುವ ಡಿಜೆ ಹಾಡುಗಳಿಗೆ ಲಕ್ಷಾಂತರ ಜನರು ಹುಚ್ಚೆದ್ದು ಕುಣಿಯಲಿದ್ದಾರೆ.

LEAVE A REPLY

Please enter your comment!
Please enter your name here