
ಬೆಳಗಾವಿ, ಅಕ್ಟೋಬರ್15: ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಮುಖಂಡರಿಗೆ ಮುಖಭಂಗವಾಗಿದೆ.
ಮೊನ್ನೆಯಷ್ಟೇ ಬೆಳಗಾವಿಯ (Belagavi) ಮರಾಠಾ ಮಂಡಲ ಕಾರ್ಯಾಲಯದಲ್ಲಿ ಎಂಇಎಸ್ (MES) ಮುಖಂಡರು ಸಭೆ ನಡೆಸಿ ಕನ್ನಡ ರಾಜ್ಯೋತ್ಸವಕ್ಕೆ ಪ್ರತಿಯಾಗಿ ಕರಾಳ ದಿನ ಆಚರಣೆಗೆ ನಿರ್ಧಾರ ಮಾಡಿದ್ದರು. ಡಿಸಿ ರೋಷನ್ ಎಚ್ಚರಿಕೆ ನೀಡಿದ್ದರೂ ಕರಾಳ ದಿನ ಆಚರಿಸಿಯೇ ಆಚರಿಸುತ್ತೇವೆ ಎಂದು ಸಭೆಯಲ್ಲಿ ತೀರ್ಮಾನಿಸಿದ್ದರು.
ಆದರೆ ಈಗ ಕರಾಳ ದಿನಕ್ಕೆ ಅನುಮತಿ ಇಲ್ಲ ಎಂದು ಎಂಇಎಸ್ ಪುಂಡರಿಗೆ ಕಡ್ಡಿಮುರಿದಂತೆ ಡಿಸಿ ಮೊಹಮ್ಮದ್ ರೋಷನ್ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಐಕ್ಯತೆ ಧಕ್ಕೆ ತರುವ ಹೋರಾಟ, ಪ್ರತಿಭಟನೆಗೆ ಅವಕಾಶ ಕೊಡುವುದಿಲ್ಲ. ಗಣೇಶೋತ್ಸವ, ಈದ್ ಮಿಲಾದ್ ಸಾಮರಸ್ಯದಿಂದ ಆಚರಣೆ ಮಾಡಿದ್ದೇವೆ. ಹಾಗೇ ನೀವೂ ರಾಜ್ಯೋತ್ಸವ ದಿನ ಬಿಟ್ಟು ಬೇರೆ ದಿನ ಹೋರಾಟ ಮಾಡಿ ಎಂದು ಡಿಸಿ ಮೊಹಮ್ಮದ್ ರೋಷನ್ ಬುದ್ಧಿ ಹೇಳಿದ್ದಾರೆ.
ಇದಕ್ಕೆ ಎಂಇಎಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು ಡಿಸಿ ಗರಂ ಆಗಿದ್ದಾರೆ. ಭಾಷಾ ಸಾಮಾರಸ್ಯ ಕಾಪಾಡುವುದು ಮುಖ್ಯವಾಗಿದೆ. ಪ್ರತಿ ರಾಜ್ಯೋತ್ಸವ ಸೇರಿದ್ರೇ ಈ ವರೆಗೆ ಬೆಳಗಾವಿ ಜಿಲ್ಲೆಯಲ್ಲಿ 2 ಸಾವಿರ ಕೇಸ್ ದಾಖಲಾಗಿವೆ. ನನಗೆ ಜಿಲ್ಲಾಧಿಕಾರಿ ಆಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯಿದೆ.
ಜಿಲ್ಲಾಧಿಕಾರಿಯಾಗಿ ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ನೀವು ಬದ್ಧರಾಗಿರಿ. ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿದೆ. ಕಾನೂನು ಸುವ್ಯವಸ್ಥೆ ಹಾಳಾದ್ರೆ ಸುಪ್ರೀಂ ಕೋರ್ಟ್ ನನ್ನನ್ನು ಕರೆಸುತ್ತೆ. ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ಒಪ್ಪಿಕೊಳ್ಳಬೇಕೆಂದು ಹೇಳಿ ಡಿಸಿ ರೋಷನ್ ಅವರು ಎಂಇಎಸ್ ಪುಂಡರಿ ಕಡ್ಡಿ ಮುರಿದಂತೆ ಖಡಕ್ ಆಗಿ ಹೇಳಿ ಕಳಿಸಿದ್ದಾರೆ.