
ಮಾ ನಿಷಾದ ಪ್ರತಿಷ್ಠಾತ್ವಂ ಆಗಮಃ ಶಾಶ್ವತಿ ಸಮಾಃ!ಯತ್ಕ್ರೌಂಚ ಮಿಥುನಾದೇಕಂ ಅವಧಿಃ ಕಾಮ ಮೋಹಿತಮಂ!!
ವಾಲ್ಮೀಕಿ ರಚಿತ ರಾಮಾಯಣದ 24 ಸಾವಿರ ಶ್ಲೋಕಗಳಲ್ಲಿನ ಮೊದಲ ಶ್ಲೋಕ ಇದು. ಬಹುಶಃ ಇಡೀ ರಾಮಾಯಣದ ಮೂಲ ಸೂತ್ರವೇ ಈ ಶ್ಲೋಕದಲ್ಲಡಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಇಲ್ಲಿನ ಕ್ರೌಂಚ ಪಕ್ಷಿಗಳೇ ರಾಮ ಮತ್ತು ಸೀತೆ, ಬೇಡನೆಂದರೆ ರಾವಣ, ಆ ವಿರಹ ಮನೋವೇದನೆಯನ್ನು ರಾಮಾಯಣವೆಂಬ ಕಥೆಯಲ್ಲಿ ಸೂಕ್ಷ್ಮವಾಗಿ ವಿಸ್ತಾರವಾಗಿ ಕಟ್ಟಿಕೊಟ್ಟ ವಾಲ್ಮೀಕಿ ಪ್ರತಿಭೆ ನಿಜಕ್ಕೂ ಮೆಚ್ಚಲೇಬೇಕು.
ರಾಮ ಇಂದಿಗೂ ಜನಪರರಲ್ಲಿ ಜನಪದರಲ್ಲಿ ಉಳಿದಿದ್ದಕ್ಕೆ ವಾಲ್ಮೀಕಿಯೇ ಮೂಲ ಕಾರಣೀಭೂತ.ರಾಮಾಯಣ ಗೊತ್ತಿಲ್ಲದ ಯಾವ ವ್ಯಕ್ತಿಯೂ ಇಲ್ಲ ಹಾಗೆಯೇ ವಾಲ್ಮೀಕಿಗೂ ಕೂಡ ಅದೇ ಗೌರವಪೂರ್ವಕ ಸ್ಥಾನಮಾನ ಸಿಗಬೇಕಾಗಿದ್ದು ಅದರ ಹೊಣೆ ನೋಡಬೇಕಾಗಿದ್ದು ನಮ್ಮಗಳ ಕರ್ತವ್ಯ ಕೂಡ.
ಬೇಡನೊಬ್ಬನ ಬೇಟೆಗೆ ಆಹುತಿಯಾದ ಗಂಡು ಕ್ರೌಂಚ ಪಕ್ಷಿಯ ಕಳೇಬರದ ಮುಂದೆ ಅದರ ಸಂಗಾತಿಯ ಆರ್ಐನಾದವನ್ನು ಸೂಕ್ಷ್ಮವಾಗಿ ಅವಲೋಕಿಸಿದ ಮಹರ್ಷಿ ವಾಲ್ಮೀಕಿ ಆ ಬೇಡನಿಗೆ ಹೇಳಿದ್ದು ಮೇಲಿನಂತೆ. ಬ್ರಹ್ಮನಿಂದ ವಿದಿತಗೊಂಡ ಈ ಶ್ಲೋಕ ಮುಂದೆ ರಾಮಾಯಣರಚನೆಗೆ ಸ್ಪೂರ್ತಿ ಆಯಿತು ಅಂತನ್ನಲಾಗಿದೆ.
ಹಿನ್ನೆಲೆ: ಕಾಡೊಳಗೆ ಭೇಟೆಯಾಡಿ ಬದುಕುವ ರತ್ನಾಕರ ಅನ್ನೋ ಓರ್ವ ಬೇಡ ವ್ಯಕ್ತಿಗೆ ಮಹರ್ಷಿ ನಾರದನ ಉಪದೇಶ ತನ್ನ ಮನಸ್ಸನ್ನು ಬದಲಾವಣೆಗೊಳಿಸುತ್ತದೆ, ನಂತರದಲ್ಲಿ ಈ ನಾಡಿನ ಅಗ್ರಮಾನ್ಯ ಪುರುಷೋತ್ತಮ ಯಾರು ಎಂಬ ರತ್ನಾಕರನ ಪ್ರಶ್ನೆಗೆ ಸಂಪೂರ್ಣವಾಗಿ ರಾಮಾನುಸಂಧಾನದ ಕಥೆಯನ್ನು ವಿವರಿಸಿದ ನಾರದರು ಆ ನಂತರ ಸ್ವಚ್ಛಂದವಾಗಿ ಹರಿಯುವ ನದಿಯ ತೀರದಲ್ಲಿ ರತ್ನಾಕರನ ಆಗಮನ ರಾಮ ರಾಮ ಅನ್ನೋ ಧ್ಯಾನದಲ್ಲಿ ತಲ್ಲೀಣ ಆ ತಲ್ಲೀನತೆಯಲ್ಲಿ ಮೈ ಮರೆತ ರತ್ನಾಕರನ ಸುತ್ತ ಮಣ್ಣಿನ ಹುತ್ತದ ರಚನೆ ಹೀಗೆ ಕಥೆ ಸಾಗುತ್ತಾ ಆತ ಅದೇ ಹುತ್ತದಿಂದ ಹೊರಬಂದ ಅನ್ನೋ ಕಥೆ ಸಂಸ್ಕೃತದಲ್ಲಿ ಹುತ್ತವನ್ನು ವಲ್ಮೀಕ ಅಂತ ಕರೆಯೋದರಿಂದ ವಲ್ಮೀಕದಿಂದಾಚೆ ಧ್ಯಾನಸ್ಥ ಸ್ಥಿತಿಯಿಂದ ಜ್ಞಾನಿಯಾಗಿ ಹೊರಬಂದ ರತ್ನಾಕರ ಮುಂದೆ ಮಹರ್ಷಿ ವಾಲ್ಮೀಕಿಯಾದ ಅನ್ನೋದು ಆತನ ಪೂರ್ವಪರಂಪರೆ ನಿಜಕ್ಕೂ ವಾಲ್ಮೀಕಿ ಕೇವಲ ಕಾವ್ಯದಲ್ಲಿ ಪಾಂಡಿತ್ಯ ಹೊಂದಿರದೇ ಐತಿಹಾಸಿಕ ವ್ಯಕ್ತಿಯಾಗಿದ್ದ.
ರಾಮಾಯಣದ ರಾಮನ ಕಥೆಯ ಮೂಲಕ ಸಮಾಜದಲ್ಲಿ ಹೆಣ್ಣಿನ ಮೇಲಿನ ಶೋಷಣೆ ಹತ್ತಿಕ್ಕಲು ನೈತಿಕವಾಗಿ ಸಂದೇಶ ರವಾನಿಸಿದ. ರಾಜಪ್ರಭುತ್ವದ ಬಗೆಗೆ ಅಪಾರ ಪಾಂಡಿತ್ಯ ಹೊಂದಿದ ಮಹರ್ಷಿ ರಾಜ್ಯಾಡಳಿತದ ಸಂಪೂರ್ಣ ಕಲ್ಪನೆಯನ್ನು ಕಟ್ಟಿಕೊಟ್ಟ ಮೇಧಾವಿ ಬರಹಗಾರ. ರಾಮಾಯಣದ ಬರವಣಿಗೆ ನಂತರದಲ್ಲಿ ಅದರ ಪ್ರಸರಣೆಗೆ ರಾಮನ ಮಕ್ಕಳಾದ ಲವ ಮತ್ತು ಕುಶರನ್ನೇ ಶಸ್ತ್ರ ಮತ್ತು ಶಾಸ್ತ್ರಗಳಲ್ಲಿ ಪಂಡಿತರನ್ನಾಗಿಸಿ ಅಶ್ವಮೇಧ ಯಾಗದ ಸಂದರ್ಭದಲ್ಲಿ ರಾಮನ ಕುದುರೆಯನ್ನು ಕಟ್ಟಿ ಹಾಕಿ ರಾಮ ಪರಿವಾರದವರನ್ನೆಲ್ಲ ಸೋಲಿಸಿ ರಾಮಾಯಣದ ಶ್ಲೋಕಗಳೊಂದಿಗೆ ತಮ್ಮ ಶೌರ್ಯ ಪ್ರದರ್ಶಿಸುವ ಮೂಲಕ ಅಯೋಧ್ಯೆಯ ಜನತೆಯ ಪ್ರೀತಿಗೆ ಪಾತ್ರರಾಗಿದ್ದು ಅವಿಸ್ಮರಣೀಯ.
ಸೀತೆಯನ್ನು ಅಗಸನೋರ್ವನ ಮಾತಿನಿಂದಾಗಿ ರಾಮ ಕಾಡಿಗಟ್ಟಿದಾಗ ತುಂಬು ಗರ್ಭಿಣಿಯಾದ ಸೀತೆಗೆ ಆಶ್ರಯ ನೀಡುವ ಮೂಲಕ ಸ್ತ್ರೀಸಂವೇದನೆಗೆ ಸ್ಪಂದಿಸಿದ ಮೇರು ವ್ಯಕ್ತಿತ್ವ ವಾಲ್ಮೀಕಿಯದು. ಹೇಳ್ತಾ ಹೋದರೆ ಸಾಕಷ್ಟಿದೆ ನಮ್ಮಲ್ಲಿ ಈಗಲೂ ಒಂದು ಮಾತಿದೆ ಅದೊಂದು ದೊಡ್ಡರಾಮಾಯಣ ಅಂತ. ರಾಮಾಯಣದ ರಾಮ ಮೇರು ವ್ಯಕ್ತಿ ಯಾದರೆ ಆತನನ್ನು ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿಯೂ ಅತ್ಯುನ್ನತ ಶ್ರೇಷ್ಠನೇ ಸರಿ. ನಾಡಿನ ಸಮಸ್ತರಿಗೂ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು
-ಟಿ. ಎಸ್. ಎಸ್